ADVERTISEMENT

ಬಿಆರ್‌ಎಲ್‌ ಕವನಗಳಲ್ಲಿ ಜೀವನಪ್ರೀತಿ ಅಡಕ: ವಿಮರ್ಶಕ ಎಚ್‌.ಎಸ್‌.ಸತ್ಯನಾರಾಯಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
   

ಬೆಂಗಳೂರು: ‘ಕವಿ ಬಿ.ಆರ್‌.ಲಕ್ಷ್ಮಣರಾವ್ ಅವರ ಕವನಗಳಲ್ಲಿ ಲವಲವಿಕೆ, ತುಂಟತನವಷ್ಟೇ ಇಲ್ಲ. ಅದರ ಮಧ್ಯೆಯೇ ಬದುಕಿನ ಗಾಂಭೀರ್ಯ, ಜೀವನಪ್ರೀತಿ ಅಡಕವಾಗಿದೆ’ ಎಂದು ವಿಮರ್ಶಕ ಎಚ್‌.ಎಸ್‌.ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಸಪ್ನಾ ಬುಕ್‌ ಹೌಸ್‌, ಸಂಗೀತಧಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿ.ಆರ್‌.ಲಕ್ಷ್ಮಣರಾವ್ ಅವರ ‘ವಿಪುಲ ರೂಪಧಾರಿಣಿ’ ಕವನ ಸಂಕಲನ ಮತ್ತು ‘ಕೊಂಚ ಸಮಯ ಬೇಕು’ ದೃಶ್ಯಗೀತೆಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಅವರ ಕವನಗಳಲ್ಲಿ ಜೀವನಪ್ರೀತಿ ಉಕ್ಕಿಹರಿಯುತ್ತದೆ. ಲಕ್ಷ್ಮಣರಾಯರ ಕವನಗಳಲ್ಲಿನ ಪ್ರೇಮಿಗಳು ಯಾವುದೋ ಕಿನ್ನರ ಲೋಕದಿಂದ ಇಳಿದುಬಂದವರಲ್ಲ. ಬದಲಿಗೆ ನಮ್ಮ ನಡುವಿನ ಬದುಕಿನಲ್ಲಿಯೇ ಇರುವ, ನಮ್ಮಂತೆಯೇ ಬದುಕಿರುವ ಜೋಡಿಗಳು. ಕೊಂಚ ತುಂಟತನದ ಜತೆಗೆ ಗಾಢವಾದ ವಿಷಾದವನ್ನು ಒಳಗೊಂಡ ಒಂದು ವಿಶಾಲ ಆವರಣವನ್ನು ಅವರ ಕಾವ್ಯದಲ್ಲಿ ಕಾಣಬಹುದು’ ಎಂದರು.

ADVERTISEMENT

ಪತ್ರಕರ್ತ ಚ.ಹ.ರಘುನಾಥ್‌, ‘ಲಕ್ಷ್ಮಣರಾಯರ ಕವನಗಳಲ್ಲಿನ ತುಂಟತನವನ್ನಷ್ಟೇ ಸಂಭ್ರಮಿಸಲಾಗುತ್ತಿದೆ. ಆದರೆ, ಅವುಗಳಲ್ಲಿ ಅಡಕವಾಗಿರುವ ಜೀವನ ಪ್ರೀತಿ ಮತ್ತು ಗಾಂಭೀರ್ಯವನ್ನು, ಮಧ್ಯಮವರ್ಗದ ವಿವೇಕವನ್ನು ಕಡೆಗಣಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.