ADVERTISEMENT

ರೈಲ್ವೆ | ₹498 ಕೋಟಿ ಕಾಮಗಾರಿಗೆ ಒಪ್ಪಂದ: ಟಿ.ಬಿ.ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 14 ಮೇ 2025, 22:30 IST
Last Updated 14 ಮೇ 2025, 22:30 IST
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ   

ಬೆಂಗಳೂರು: ತುಮಕೂರು–ಚಿತ್ರದುರ್ಗ–ದಾವಣಗೆರೆ ನಡುವಿನ ಉದ್ದೇಶಿತ ಬ್ರಾಡ್‌ಗೇಜ್‌ ರೈಲ್ವೆ ಮಾರ್ಗದಲ್ಲಿ ತಿಮ್ಮರಾಜನಹಳ್ಳಿಯಿಂದ ತಾವರೆಕೆರೆಯವರೆಗೆ ₹498 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಂದ ಆಗಿದ್ದು, ಶಿರಾ ಸೇರಿ ನಾಲ್ಕು ಕಡೆಗಳಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ಶಿರಾ ಶಾಸಕ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಒಟ್ಟು 41 ಕಿ.ಮೀ ಉದ್ದದ ಈ ಕಾಮಗಾರಿಗೆ ಫರೀದಾಬಾದ್‌ನ ಮೆಸರ್ಸ್ ಕೆ.ಆರ್.ಸಿ. ಆಲ್ಟಿಸ್‌ ಜಾಯಿಂಟ್‌ ವೆಂಚರ್‌ ಎಂಬ ಏಜೆನ್ಸಿಯೊಂದಿಗೆ ಒಪ್ಪಂದವಾಗಿದೆ. ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ ಮತ್ತು ತಾವರೆಕೆರೆಯಲ್ಲಿ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಇಲ್ಲಿ ಒಟ್ಟು 11 ದೊಡ್ಡ ಸೇತುವೆಗಳು, 55 ಕಿರು ಸೇತುವೆಗಳು– ಕಲ್ವರ್ಟ್‌ಗಳು, 35 ಮೇಲು ಸೇತುವೆಗಳು ಹಾಗೂ 35 ಅಂಡರ್‌ ಬ್ರಿಜ್‌ಗಳು ಕಾಮಗಾರಿಯ ಭಾಗವಾಗಿರುತ್ತವೆ ಎಂದು ಜಯಚಂದ್ರ ವಿವರಿಸಿದ್ದಾರೆ.

ADVERTISEMENT

ಈ ರೈಲು ಮಾರ್ಗವು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸೀಬಿಯಿಂದ ಆರಂಭವಾಗಿ ಧರ್ಮಪುರದ ಮೂಲಕ 41 ಕಿ.ಮೀ ಉದ್ದಕ್ಕೆ ಹಾದುಹೋಗುತ್ತದೆ. ಇದರಿಂದ ಶಿರಾ ತಾಲ್ಲೂಕಿನಲ್ಲಿ ಶೇಂಗಾ, ತೆಂಗಿನಕಾಯಿ, ಅಡಿಕೆ, ಹುಣಸೆಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳನ್ನು ಬೆಳೆಯುವ ರೈತರಿಗೆ ಉತ್ಪನ್ನಗಳ ಸಾಗಣೆ ಹಾಗೂ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜತೆಗೆ ಈ ಭಾಗದ ಜನಸಾಮಾನ್ಯರಿಗೆ ದಾವಣಗೆರೆ ಮತ್ತು ಬೆಂಗಳೂರಿಗೆ ಹೋಗುವುದು ಇನ್ನಷ್ಟು ಸುಲಭ ಎಂದು ಅವರು ಹೇಳಿದ್ದಾರೆ.

ಈ ಯೋಜನೆಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೊಂದಿಗೆ ಶಿರಾದಲ್ಲಿ ಸಭೆ ನಡೆಸಲಾಗುವುದು. ಶಿರಾ ಆಸುಪಾಸಿನಲ್ಲಿ ಈಗ ಐದು ರಾಷ್ಟ್ರೀಯ ಹೆದ್ದಾರಿಗಳಿದ್ದು, ಈ ರೈಲ್ವೆ ಮಾರ್ಗವೂ ಬಳಕೆಗೆ ಸಿದ್ಧಗೊಂಡರೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ದೊರೆಯುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.