ADVERTISEMENT

ನೂರು ದಿನಗಳಲ್ಲಿ ಖುಷಿಯಾಗಿರಲಿಲ್ಲ, ಸ್ವಂತಕ್ಕೇನೂ ಬಳಸಿಕೊಳ್ಳಲಿಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 10:32 IST
Last Updated 5 ನವೆಂಬರ್ 2019, 10:32 IST
   

ಬೆಂಗಳೂರು: ‘ಸರ್ಕಾರಕ್ಕೆ ನೂರು ದಿನಗಳು ಅಗ್ನಿಪರೀಕ್ಷೆಯಾಗಿತ್ತು. ಆ ನೂರೂ ದಿನಗಳನ್ನು ಖುಷಿಯಿಂದ ಕಳೆಯಲಿಲ್ಲ. ಸ್ವಂತಕ್ಕೆ ಬಳಸಲಿಲ್ಲ ಜನರ ನೋವಿನಲ್ಲಿ ಬೆರೆಯುವ, ಕಣ್ಣೀರೊರೆಸುವ ಕೆಲಸ ಮಾಡಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾವುಕರಾಗಿ ನುಡಿದರು.

‘ಮುಂದಿನ 100 ದಿನಗಳಲ್ಲಿ ಕರ್ನಾಟಕ ಮತ್ತು ಬೆಂಗಳೂರಿನ ಚಿತ್ರಣವನ್ನೇ ಬದಲಿಸುತ್ತೇನೆ. ಈ ದಿಸೆಯಲ್ಲಿ ಒಂದು ಕ್ಷಣ ವಿರಮಿಸದೇ ಶ್ರಮವಹಿಸುತ್ತೇನೆ’ ಎಂದು ಅವರು ‘ದಿನ ನೂರು ಸಾಧನೆ ನೂರಾರು’ 100 ದಿನಗಳ ಆಡಳಿತದ ಪ್ರಗತಿಯ ವರದಿ ಬಿಡುಗಡೆ ಮಾಡಿ ಮಾತನಾಡಿದರು.

ಈ ಕುರಿತು ಹಮ್ಮಿಕೊಂಡಿರುವ ಹೊಸ ಯೋಜನೆ ಮತ್ತು ಕಾರ್ಯಕ್ರಮಗಳೇನು ಎಂಬ ಪ್ರಶ್ನೆಗೆ, ಹೊಸ ಕಾರ್ಯಕ್ರಮಗಳನ್ನು ಈಗಲೇ ಹೇಳುವುದಿಲ್ಲ, ಮುಂಬರುವ ಬಜೆಟ್‌ನಲ್ಲಿ ವಿವರಿಸುತ್ತೇನೆ ಎಂದು ಅವರು ಹೇಳಿದರು.

ADVERTISEMENT

ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ಮತ್ತು ಪ್ರವಾಹ ಬಂದಿತ್ತು. ಒಂದು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಅಲ್ಲಿಯೇ ಉಳಿದೆ. ಸಂತ್ರಸ್ತರು ನೆಮ್ಮದಿಯಿಂದ ಬದುಕು ಸಾಗಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದೀವೆ. ಹಿಂದೆ ಸಾಕಷ್ಟು ಬಾರಿ ನೈಸರ್ಗಿಕ ವಿಕೋಪ ಸಂಭವಿಸಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಪರಿಹಾರವನ್ನು ಯಾರೂ ಕೊಟ್ಟಿಲ್ಲ. ಇದು ಸಾಧನೆಯಲ್ಲವೆ ಎಂದು ಅವರು ಪ್ರಶ್ನಿಸಿದರು.

ಮುಂದಿನ ಆದ್ಯತೆಗಳು: ಮುಂಬರುವ ದಿನಗಳಲ್ಲಿ ಕೃಷಿ, ನೀರಾವರಿ, ವಸತಿ, ಕೈಗಾರಿಕೆ ಮತ್ತು ಬೆಂಗಳೂರು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ನಿಮ್ಮ ಸರ್ಕಾರಕ್ಕೆ ಶೂನ್ಯ ಅಂಕ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಿಮ್ಮ ಸರ್ಕಾರ ನೀವು ಎಷ್ಟು ಅಂಕ ಕೊಡುತ್ತೀರಿ ಎಂಬ ಪ್ರಶ್ನೆಗೆ, ಅಂಕ ಕೊಡುವ ಅಧಿಕಾರ ರಾಜ್ಯದ ಜನರಿಗಿದೆಯೇ ಹೊರತು ಬೇರೆ ಯಾರಿಗೂ ಇಲ್ಲ. ನನ್ನ ಸಂಪುಟ ಸಹೋದ್ಯೊಗಿಗಳಿಗೂ ಅಂಕ ನೀಡಲು ಹೋಗುವುದಿಲ್ಲ. ಅವರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.