ADVERTISEMENT

ಚರ್ಚೆಗೆ ಗ್ರಾಸವಾದ ಬಿಎಸ್‌ವೈ– ಸಂತೋಷ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 19:45 IST
Last Updated 23 ನವೆಂಬರ್ 2020, 19:45 IST
ಬಿ.ಎಸ್‌. ಯಡಿಯೂರಪ್ಪ, ಬಿ.ಎಲ್. ಸಂತೋಷ್
ಬಿ.ಎಸ್‌. ಯಡಿಯೂರಪ್ಪ, ಬಿ.ಎಲ್. ಸಂತೋಷ್   

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತು ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಈ ಮಾತುಕತೆ ನಡೆಯಿತು. ಆ ಬಳಿಕ ಬಿ.ವೈ.ವಿಜಯೇಂದ್ರ ಅವರೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಸಂತೋಷ್‌, ನಳಿನ್‌ ಭೇಟಿ ಮತ್ತು ಮಾತುಕತೆ ವಿವಿಧ ರೀತಿಯ ಚರ್ಚೆಗಳಿಗೂ ಕಾರಣವಾಗಿದೆ. ಇದರಿಂದ ನಾಯಕತ್ವ ಬದಲಾವಣೆ ವಿಚಾರವೂ ಮುನ್ನೆಲೆಗೆ ಬಂದಿದೆ ಎಂದೂ ವಿಶ್ಲೇಷಿಸಲಾಗಿದೆ.

ADVERTISEMENT

ಇದೇ 25 ರಂದು ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದ್ದು, ಈ ಕಾರಣದಿಂದಲೂ ಸಂತೋಷ್‌ ಭೇಟಿ ಮಾಡಿರಬಹುದು. ಇದರ ಬೆನ್ನಲ್ಲೇ ಸಚಿವಾಕಾಂಕ್ಷಿ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಬಂದಿದ್ದರು. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರೂ ಭೇಟಿ ಮಾಡಿದರು.

ಸಚಿವ ಸಂಪುಟ ವಿಸ್ತರಣೆ ವರಿಷ್ಠರ ತೀರ್ಮಾನ: ಕಟೀಲ್
‘ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆಯ ಬಗ್ಗೆ ವರಿಷ್ಠರೇ ತೀರ್ಮಾನ ತೆಗೆದುಕೊಳ್ಳಲಿದ್ದು, ನಾಯಕತ್ವದ ಬಗ್ಗೆ ಯಾವುದೇ ಗೊಂದಲವಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಿಂದ ಕಾರ್ಯಕರ್ತರು ಹಾಗೂ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ವಿಚಾರದಲ್ಲಿ ವರಿಷ್ಠರು ಸೂಕ್ತ ಕಾಲದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಮತ್ತು ಪ್ರದೇಶವಾರು ಪ್ರಾತಿನಿಧ್ಯವನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇವೆ. ಸಂಪುಟ ವಿಸ್ತರಣೆ ತಡವಾಗಿರುವುದಕ್ಕೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ನಳಿನ್‌ ಕುಮಾರ್‌ ಹೇಳಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಅವರು ಡಿ.5 ಕ್ಕೆ ಬೆಳಗಾವಿ ಬರಲಿದ್ದಾರೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.