ADVERTISEMENT

ಊರುಗಳಿಗೆ ತೆರಳಬೇಡಿ: ವಲಸೆ ಕಾರ್ಮಿಕರಲ್ಲಿ ಸಿಎಂ ಯಡಿಯೂರಪ್ಪ ಮನವಿ

ವಲಸೆ ಕಾರ್ಮಿಕರ ಸಮಸ್ಯೆ– ಬಿಲ್ಡರ್‌ಗಳ ಜೊತೆ ಯಡಿಯೂರಪ್ಪ ಸಭೆ

​ಪ್ರಜಾವಾಣಿ ವಾರ್ತೆ
Published 5 ಮೇ 2020, 11:12 IST
Last Updated 5 ಮೇ 2020, 11:12 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ಕಾರ್ಮಿಕರು ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿಯೇ ಅವರಿಗೆ ಕೆಲಸ ಕೊಡಲು ಸರ್ಕಾರ ಬದ್ಧವಾಗಿದ್ದು ಇದಕ್ಕೆ ಕೈಗಾರಿಕಾ ಸಂಸ್ಥೆಗಳೂ ಸಹ ಒಪ್ಪಿಕೊಂಡಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಗಳವಾರ ಹೇಳಿದರು.

ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಲ್ಡರ್‌ಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಕಾರ್ಮಿಕರು ತರಾತುರಿಯಲ್ಲಿ ಊರಿಗೆ ಹೋಗಬೇಕೆಂಬ ಪ್ರಯತ್ನ ಮಾಡದೆ, ಇಲ್ಲೇ ಉಳಿದುಕೊಂಡು ಕೆಲಸ ಮಾಡಬೇಕು. ಏನೇ ತೊಂದರೆ ಇದ್ದರೂ ಅನುಕೂಲ ಮಾಡಿಕೊಡಲಾಗುವುದು. ತಪ್ಪುಗ್ರಹಿಕೆಯಿಂದ ಬಹಳಷ್ಟು ಸಂಖ್ಯೆಯ ಕಾರ್ಮಿಕರು ಅನಗತ್ಯವಾಗಿ ಊರಿಗೆ ಹೊರಟು ಹೋಗುವ ಮನಸ್ಥಿತಿಯಲ್ಲಿದ್ದರು. ಈ ಪೈಕಿ ಅನೇಕರಿಗೆ ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

ಇತರ ರಾಜ್ಯಗಳಲ್ಲಿರುವ ಕೋವಿಡ್‌–19 ಪರಿಸ್ಥಿತಿಗೆ ಹೋಲಿಸಿದರೆ ನಮ್ಮಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಹೀಗಾಗಿ ಕೆಂಪು ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವ್ಯಾಪಾರ, ಕಟ್ಟಡ ನಿರ್ಮಾಣ ಕಾಮಗಾರಿ, ಕೈಗಾರಿಕೆ ಕೆಲಸ ಮತ್ತೆ ಆರಂಭಿಸಬೇಕಾಗಿದೆ. ಈ ಕಾರಣಕ್ಕೆ, ಕಾರ್ಮಿಕರ ಅನಗತ್ಯ ಪ್ರಯಾಣ ನಿಯಂತ್ರಿಸಬೇಕಾದ ಬಗ್ಗೆಯೂ ಬಿಲ್ಡರ್‌ಗಳ ಜೊತೆ ಚರ್ಚೆ ನಡೆಸಲಾಯಿತು’ ಎಂದರು.

ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದ್ದೇವೆ. ಕೆಲಸ ಮಾಡದವರಿಗೂ ಸಂಬಳ, ಒಳ್ಳೆಯ ಊಟ ನೀಡಿರುವುದಾಗಿ ಬಿಲ್ಡರ್‌ಗಳು ತಿಳಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

‘ನೇಕಾರರು ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚಿಸುತ್ತೇನೆ. ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಹಣಕಾಸಿನ ಇತಿಮಿತಿ ನೋಡಿಕೊಂಡು ಕೆಲವು ಸವಲತ್ತುಗಳನ್ನು ಕೊಡಲು ಪ್ರಯತ್ನಿಸುತ್ತೇನೆ ಎಂದು ಯಡಿಯೂರಪ್ಪ ಭರವಸೆ ನಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.