ADVERTISEMENT

ಮಾದರಿ ರಾಜ್ಯ ನಿರ್ಮಾಣ ಗುರಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 21:30 IST
Last Updated 27 ಜುಲೈ 2020, 21:30 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ‘ರಾಜ್ಯದ ಅಭಿವೃದ್ಧಿಗೆ ಕೊರೊನಾ ಅಡಚಣೆಯಾಗಿದೆ. ಇದರ ಮಧ್ಯೆಯೂ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ತಮ್ಮ ಸರ್ಕಾರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸರಳವಾಗಿ ಏರ್ಪಡಿಸಿದ್ದ ‘ಸವಾಲುಗಳ ವರ್ಷ-ಪರಿಹಾರದ ಸ್ಪರ್ಶ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉಳಿದಿರುವ ಅವಧಿಯಲ್ಲಿ ಸುಭದ್ರ ಸರ್ಕಾರ ನೀಡುವುದರ ಜತೆಗೆ, ಮಾದರಿ ರಾಜ್ಯ ನಿರ್ಮಾಣವೇ ನನ್ನ ಏಕೈಕ ಗುರಿ’ ಎಂದರು.

‘ಅಧಿಕಾರ ವಹಿಸಿಕೊಂಡಾಗ ಬರ ಇತ್ತು. ಕೆಲವೇ ದಿನಗಳಲ್ಲಿ ಭಾರಿ ಮಳೆ, ಪ್ರವಾಹ ಬಂದಿತು. ಈ ಅಗ್ನಿಪರೀಕ್ಷೆಯನ್ನು ಏಕಾಂಗಿಯಾಗಿ ಎದುರಿಸಿದೆ. ಒಂದು ಕಡೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ಕಲ್ಪಿಸುವುದರ ಜತೆಗೆ ರೈತರಿಗೆ ಕಿಸಾನ್‌
ಸಮ್ಮಾನ್ ಯೋಜನೆಯಡಿ 50 ಲಕ್ಷ ರೈತರಿಗೆ ತಲಾ ₹4 ಸಾವಿರ ಅವರ ಖಾತೆಗಳಿಗೇ ಜಮೆ ಮಾಡುವ ಯೋಜನೆಗೆ ಚಾಲನೆ ನೀಡಿದೆ. ಮನೆ ಕಳೆದುಕೊಂಡವರಿಗೆ ಹೊಸದಾಗಿ ಕಟ್ಟಿಕೊಡಲು ತಲಾ ₹5 ಲಕ್ಷದವರೆಗೆ ನೆರವು ನೀಡಿದೆ’ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

‘ಅಭಿವೃದ್ಧಿಯಲ್ಲಿ ಎಂದೂ ಜಾತಿ, ಧರ್ಮದ ತಾರತಮ್ಯ ಮಾಡಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರನ್ನೂನ ಸಮಾನ ದೃಷ್ಟಿಯಲ್ಲಿ ಕಂಡಿದ್ದೇನೆ. ಕಳೆದ ಒಂದು ವರ್ಷದಲ್ಲಿ ಎಲ್ಲೂ ಕೋಮು ಗಲಭೆ ಆಗಿಲ್ಲ’ ಎಂದು ಅವರು ಹೇಳಿದರು.

‘ಹೊಸ ಕೈಗಾರಿಕಾ ನೀತಿ, ‘ನನ್ನ ಬೆಳೆ ನನ್ನ ಹಕ್ಕು’ ಕಲ್ಪನೆಯಡಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಕೈಗಾರಿಕೆ ಸ್ಥಾಪನೆಗೆ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಕೆಲವರು ಟೀಕೆ–ಟಿಪ್ಪಣಿ ಮಾಡಿದ್ದರೂ ರಾಜ್ಯದ ಜನರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ’ ಎಂದು ಯಡಿಯೂರಪ್ಪ ತಿಳಿಸಿದರು.

‘ದಿವಂಗತ ಅನಂತಕುಮಾರ್ ಅವರ ಕನಸಿನ ಸಬ್‌ಅರ್ಬನ್‌ ರೈಲು ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆಗಳ ಅಭಿವೃದ್ಧಿ ಹಾಗೂ 970 ಕಿ.ಮೀ ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದರು.

ದ್ವೇಷದ ರಾಜಕಾರಣ ಮಾಡಿಲ್ಲ: ‘ನಾನು ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಸರ್ಕಾರದ ವಿರುದ್ಧ ಟೀಕೆ–ಟಿಪ್ಪಣಿ ಮಾಡುವವರನ್ನೂ ಪ್ರೀತಿಯಿಂದಲೇ ಕಂಡಿದ್ದೇನೆ’ ಎಂದು ಹೇಳಿದರು.

‘ಕಳೆದ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳು ಮತ್ತು ವಿಧಾನ ಸಭೆ ಉಪಚುನಾವಣೆಯಲ್ಲಿ 12 ಸ್ಥಾನ ಗಳನ್ನು ಗೆದ್ದಿದ್ದೇವೆ. ಇದಕ್ಕೆ ರಾಜ್ಯದ ಜನರ ಪ್ರೀತಿ ಮತ್ತು ವಿಶ್ವಾಸವೇ ಕಾರಣ. ಇದರ ಹಿಂದೆ ಕಾರ್ಯಕರ್ತರ ಶ್ರಮವಿದೆ’ ಎಂದು ಹೇಳಿದರು.

ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ

ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿತ್ತು. ವೇದಿಕೆ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಇದ್ದರು. ಸಚಿವರು, ಶಾಸಕರು ಮತ್ತು ಸಂಸದರು, ಅಧಿಕಾರಿಗಳು ಸೇರಿ ಸುಮಾರು 70ರಿಂದ 100 ಮಂದಿ ಇದ್ದರು. ಇದೇ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಸಾಧನೆಯ ಕೈಪಿಡಿಗಳನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮ ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ ಮೂಲಕ ನೇರ ಪ್ರಸಾರವಾಯಿತು.

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು, ಪ್ರವಾಹ ಸಂತ್ರಸ್ತರು ಮತ್ತು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಬಂದವರ ಜತೆಗೆ ಯಡಿಯೂರಪ್ಪ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.