ADVERTISEMENT

ಬೆಂಬಲಕ್ಕಾಗಿ ಸಭೆ ನಡೆಸಿದ ಬಿಎಸ್‌ವೈ; ಹೆಚ್ಚಿನ ಅನುದಾನದ ಭರವಸೆ

ಶಾಸಕರ ವಿಶ್ವಾಸ ಹೆಚ್ಚಿಸಿಕೊಳ್ಳಲು ಮುಖ್ಯಮಂತ್ರಿ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 20:43 IST
Last Updated 1 ಆಗಸ್ಟ್ 2020, 20:43 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಮತ್ತು ಶಾಸಕರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಮತ್ತು ಶಾಸಕರು.   

ಬೆಂಗಳೂರು: ನಾಯಕತ್ವ ಬದಲಾವಣೆಯ ಬಗ್ಗೆ ಬಿಜೆಪಿಯಲ್ಲಿ ಚರ್ಚೆ, ಸದ್ದಿಲ್ಲದಂತೆ ಸಭೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಶಾಸಕರ ವಿಶ್ವಾಸ ಹೆಚ್ಚಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಂದಾಗಿದ್ದಾರೆ. ತಮ್ಮ ಬಲ ಕ್ರೋಡೀಕರಣದ ಯತ್ನಕ್ಕೆ ಕೈಹಾಕಿದ್ದಾರೆ.

ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದ್ದಾಗಲೇ 20 ಶಾಸಕರಿಗೆ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟ ಯಡಿಯೂರಪ್ಪ, ಅವರ ಮನಗೆಲ್ಲುವ ಕಾರ್ಯತಂತ್ರ ಹೆಣೆದಿದ್ದರು.

ಈ ಬೆಳವಣಿಗೆ ಮಧ್ಯೆಯೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸರ್ಕಾರದ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಚಕ್ಕರ್ ಹಾಕಿ, ದೆಹಲಿಗೆ ಹೋಗಿದ್ದರು. ಅಲ್ಲದೇ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಹಾಗೂ ಹಿರಿಯ ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.

ADVERTISEMENT

‘ಇದೊಂದು ಪೂರ್ವ ನಿಗದಿತ ಭೇಟಿಯಾಗಿದ್ದು, ರಾಜಕೀಯ ಉದ್ದೇಶವಾಗಲಿ, ನಾಯಕತ್ವ ಬದಲಾವಣೆಯ ವಿಷಯವಾಗಲಿ ಚರ್ಚೆ ಮಾಡಿಲ್ಲ. ನಮ್ಮ ನಾಯಕರಾಗಿರುವಯಡಿಯೂರಪ್ಪ ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ಸವದಿ ಸ್ಪಷ್ಟನೆ ನೀಡಿದ್ದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಡೆಸಿದ ಸಭೆ, ಸವದಿ ದೆಹಲಿ ಯಾತ್ರೆಯ ಹಿಂದೆ ನಾಯಕತ್ವ ಬದಲಾವಣೆಯ ಕಾರ್ಯತಂತ್ರ ಇಲ್ಲ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ, ಈ ಘಟನಾವಳಿ ಎಬ್ಬಿಸಿದ ಅಲೆ, ಪಕ್ಷದೊಳಗೆ ಕಂಪನಕ್ಕೆ ಕಾರಣವಾಗಿದೆ ಎಂಬುದನ್ನು ಯಾವ ನಾಯಕರೂ ಅಲ್ಲಗಳೆಯುತ್ತಿಲ್ಲ.

ಬಿಎಸ್‌ವೈ ಸಭೆ: ಈ ಬೆಳವಣಿಗೆಗಳ ಬೆನ್ನಲ್ಲೇ, ಯಡಿಯೂರಪ್ಪ ಅವರು ಜುಲೈ 30ರ (ಗುರುವಾರ) ರಾತ್ರಿ ‘ಕಾವೇರಿ’ಯಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ, ವಿ. ಸೋಮಣ್ಣ ಹಾಗೂ 12ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು ಎಂದು ಮೂಲಗಳು ಹೇಳಿವೆ.

‘ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಜೋಶಿ ಸಭೆ ಹಾಗೂ ಸವದಿಯವರ ದೆಹಲಿ ಭೇಟಿಯ ಬಗ್ಗೆ ವಿವರ ನೀಡಿದರು. ಅಧಿಕಾರಕ್ಕೇರಿದ ದಿನದಿಂದ ಒಂದು ದಿನ ಸುಮ್ಮನೆ ಕುಳಿತು ಕಾಲಕಳೆದಿಲ್ಲ. ಮೊದಲು ಪ್ರವಾಹ, ಆಮೇಲೆ ಉಪ
ಚುನಾವಣೆ, ಈಗ ಕೊರೊನಾದ ಕಾರಣಕ್ಕೆ ಬಿಡುವಿಲ್ಲದಂತೆ ದುಡಿಯುತ್ತಿದ್ದೇನೆ. ಜನರ ಹಿತಕ್ಕೆ ಕಂಕಣಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಭಾವುಕವಾಗಿ ಹೇಳಿದರು’ ಎಂದು ಸಭೆಯಲ್ಲಿ ಪಾಲ್ಗೊಂಡ ಶಾಸಕರೊಬ್ಬರು ತಿಳಿಸಿದರು.

‘ನನ್ನ ವಿರುದ್ಧ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಮೇಲಿಂದ ಮೇಲೆ ಏನೇನು ವರದಿ ತರಿಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ನನಗೆ ಇದೆ. ಇನ್ನು ಮೂರು ವರ್ಷ ನಮಗೆ ಅಧಿಕಾರ ಇದೆ. ಪಕ್ಷವನ್ನು ಕಷ್ಟಪಟ್ಟು ಅಧಿಕಾರಕ್ಕೆ ತಂದಿದ್ದೇನೆ. ನೀವು ನನ್ನ ಜತೆ ನಿಲ್ಲುತ್ತೀರಿ ಎಂಬ ವಿಶ್ವಾಸ ನನ್ನದು. ಇನ್ನು ಮುಂದೆ ಅನುದಾನ, ಕ್ಷೇತ್ರದ ಕೆಲಸ, ವರ್ಗಾವಣೆ ಯಾವುದೇ ಆಗಬೇಕಾದರೂ ನೇರವಾಗಿ ನನ್ನ ಬಳಿ ಬನ್ನಿ’ ಎಂದು ಹೇಳಿದ್ದಾಗಿ ಅವರು ವಿವರಿಸಿದರು.

‘ಸಭೆಯಲ್ಲಿ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ, ಹಳೆ ಮೈಸೂರು ಭಾಗದ ಕೆಲವು ಶಾಸಕರು ಇದ್ದರು. ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಅನೇಕ ಶಾಸಕರಿಗೆ ಕರೆ ಮಾಡಿದ ಯಡಿಯೂರಪ್ಪ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೆಲವು ಶಾಸಕರ ಜತೆ ಬಿ.ವೈ. ವಿಜಯೇಂದ್ರ ಕೂಡ ಮಾತನಾಡಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ‘ ಎಂದು ಮತ್ತೊಬ್ಬ ಶಾಸಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.