ADVERTISEMENT

ಅವಧಿ ಪೂರೈಸಲಿದ್ದಾರೆ ಬಿ.ಎಸ್‌.ಯಡಿಯೂರಪ್ಪ: ಅಮಿತ್‌ ಶಾ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 19:42 IST
Last Updated 16 ಜನವರಿ 2021, 19:42 IST
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಮರಣಿಕೆ ನೀಡಿ ಸನ್ಮಾನಿಸಿದರು -–ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಮರಣಿಕೆ ನೀಡಿ ಸನ್ಮಾನಿಸಿದರು -–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ. ಅಷ್ಟೇ ಅಲ್ಲ, ನಂತರದ 5 ವರ್ಷಕ್ಕೆ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ‘ಪೊಲೀಸ್‌ ಗೃಹ–2025’ ಯೋಜನೆ ಮತ್ತು ಬಹುಮಹಡಿ ಪೊಲೀಸ್‌ ವಸತಿಗೃಹಗಳು ಮತ್ತು ವಿಜಯಪುರದಲ್ಲಿ ಭಾರತೀಯ ಮೀಸಲು ಪಡೆಯ (ಐಆರ್‌ಬಿ) ನೂತನ ಆಡಳಿತ ಕಚೇರಿಯ ಕಟ್ಟಡವನ್ನು ವರ್ಚುವಲ್‌ ಮೂಲಕ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಯಡಿಯೂರಪ್ಪ ಸರ್ಕಾರ ಅಭಿವೃದ್ಧಿಪರ, ಜನಪರ ಕೆಲಸಗಳನ್ನು ಮಾಡುತ್ತಿದೆ. ರಾಜ್ಯಕ್ಕೆ ಪ್ರಧಾನಿ ಮೋದಿಯವರ ಹಲವು ಯೋಜನೆಗಳಿವೆ. ಸರ್ಕಾರ ಪತನವಾಗಲಿದೆ ಎಂಬ ಕಾಂಗ್ರೆಸ್‌ ಕನಸು ನನಸಾಗದು’ ಎಂದ ಶಾ, ‘ಮೂಲಸೌಲಭ್ಯ, ಕೃಷಿ ಸೇರಿದಂತೆ ಎಲ್ಲ ವಲಯಗಳಲ್ಲಿ ರಾಜ್ಯ ಸರ್ಕಾರಕ್ಕೆ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದರು.

ಮೂರು ತಾಸು ವಿಳಂಬವಾಗಿ ಆರಂಭಗೊಂಡ ಕಾರ್ಯಕ್ರಮದಲ್ಲಿ ಮಾತಿನ ಉದ್ದಕ್ಕೂ ಕೊರೊನಾ ವಿರುದ್ಧದ ದೇಶದ ಹೋರಾಟವನ್ನು ಶಾ ಶ್ಲಾಘಿಸಿದರು. ‘ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ಯಶಸ್ವಿಯಾಗಿದೆ. ಆದರೆ, ವಕ್ರದೃಷ್ಟಿ ಇರುವವರು ಇದನ್ನೂ ವಕ್ರದೃಷ್ಟಿಯಿಂದ ನೋಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಗೃಹ ನಿರ್ಮಾಣ ಯೋಜನೆ ಪೊಲೀಸರ ಮೇಲಿನ ಸರ್ಕಾರದ ಕಾಳಜಿಯ ಪ್ರತೀಕ. ಆರೋಗ್ಯ ಭಾಗ್ಯ ಯೋಜನೆಯಲ್ಲಿ ಪೊಲೀಸ್‌ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದರು.

ರಾಜ್ಯ ಗೃಹ ಇಲಾಖೆಯ ಸಾಧನೆಗಳನ್ನು ತೆರೆದಿಟ್ಟ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಇಲಾಖೆಯಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇತ್ತು. ಅದೀಗ ಶೇ 11ಕ್ಕೆ ಇಳಿದಿದೆ. ಮಾರ್ಚ್‌ ವೇಳೆಗೆ ಅದನ್ನು ಶೇ 6ಕ್ಕೆ ಇಳಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.