ADVERTISEMENT

ಮುಖ್ಯಮಂತ್ರಿ ಮಾಡಲು ಪಣ; ನಿತ್ಯವೂ ಆತಂಕದ ಕ್ಷಣ

ಚಂದ್ರಹಾಸ ಹಿರೇಮಳಲಿ
Published 15 ಜನವರಿ 2019, 20:00 IST
Last Updated 15 ಜನವರಿ 2019, 20:00 IST
   

ಶಿವಮೊಗ್ಗ: ರಾಜ್ಯದ ಸಮ್ಮಿಶ್ರ ಸರ್ಕಾರ ಕೆಡವಿ ಶತಾಯಗತಾಯ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಪಣ ತೊಟ್ಟಿರುವ ಬಿಜೆಪಿಯಅವರ ಆಪ್ತ ಶಾಸಕರು ಉಳಿದ ಶಾಸಕರಿಗೆ ಕಾಂಗ್ರೆಸ್, ಜೆಡಿಎಸ್ ಗಾಳ ಹಾಕದಂತೆ ಕಣ್ಗಾವಲು ಇಟ್ಟಿದ್ದಾರೆ.

ದೆಹಲಿ ಬಳಿಯ ಗುರುಗ್ರಾಮದ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಶಾಸಕರಾದ ಹಾಲಪ್ಪ ಹರತಾಳು, ಕುಮಾರ್ ಬಂಗಾರಪ್ಪ, ಆರಗ ಜ್ಞಾನೇಂದ್ರ, ಕೆ.ಬಿ. ಅಶೋಕನಾಯ್ಕ, ಎಂ.ಪಿ. ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌.ವಿ. ರಾಮಚಂದ್ರ ಮತ್ತಿತರರು ಪಕ್ಷದ ಇತರೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ.

ಒಳಗೊಳಗೇ ಆತಂಕ: ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದರೂ ಆಪರೇಷನ್ ಯಶಸ್ವಿಯಾಗುವ ಬಗ್ಗೆ ಸ್ವತಃ ಯಡಿಯೂರಪ್ಪ ಅವರನ್ನೂ ಆತಂಕ ಕಾಡುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಶಾಸಕರು ಮಾಹಿತಿ ನೀಡಿದರು.

ADVERTISEMENT

ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದಿದ್ದರೂ, ಕಾಂಗ್ರೆಸ್ ಅತೃಪ್ತರು ಹಾಗೆ ಮಾಡಲು ಸಾಧ್ಯವಿಲ್ಲ. ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು. ಒಂದು ವೇಳೆ ಸ್ಪೀಕರ್ ತಕ್ಷಣಕ್ಕೆ ರಾಜೀನಾಮೆ ಅಂಗೀಕರಿಸದೆ ವಿಳಂಬ ಮಾಡಿದರೆ ಅವರ ಮನಸ್ಸು ಬದಲಾಗಬಹುದು. ದೋಸ್ತಿ ಸರ್ಕಾರ ಅವರಿಗೆ ಮತ್ತೆ ಮಂತ್ರಿ ಮಾಡುವ ಆಮಿಷ ನೀಡಬಹುದು. ಹಾಗಾಗಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಕ್ರಿಯೆಯ ಹಾದಿ ಅಷ್ಟು ಸುಲಭವಾಗಿಲ್ಲ ಎನ್ನುವುದು ಅವರ ಹೇಳಿಕೆ.

ಬಿಜೆಪಿ 2008ರಲ್ಲಿ ನಡೆದ ಚುನಾವಣೆಯಲ್ಲಿ 110 ಸ್ಥಾನ ಗಳಿಸಿತ್ತು. ಬಹುಮತಕ್ಕೆ ಬೇಕಿದ್ದ 3 ಸ್ಥಾನಕ್ಕಾಗಿ ಪಕ್ಷೇತರ ಶಾಸಕರ ಮೇಲೆ ಅವಲಂಬಿತವಾಗಿತ್ತು. ಆ ನಂತರ ಸರ್ಕಾರ ಕೆಡವಲು ಅವರು ನಡೆಸಿದ್ದ ಆಟ, ಮತ್ತೆ ಮತ್ತೆ ಕುಸಿದ ಸಂಖ್ಯಾಬಲ ಸರಿದೂಗಿಸಲು ನಡೆದ ಆಪರೇಷನ್ ಕಮಲ ಸ್ಪೀಕರ್ ನಡೆ ಇವೆಲ್ಲವನ್ನೂ ವಿವರಿಸಿದರು.

‘ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ಸೇರಿ 118 ಸ್ಥಾನ, ಬಿಜೆಪಿ 104 ಹೊಂದಿರುವ ಪರಿಣಾಮ ಅಧಿಕಾರಕ್ಕೆ ಬರಲು ಕಾಂಗ್ರೆಸ್, ಜೆಡಿಎಸ್‌ನ ಕನಿಷ್ಠ 13 ಶಾಸಕರು ರಾಜೀನಾಮೆ ನೀಡಬೇಕು. ಅಲ್ಲಿಗೆ ಅವರ ಬಲ 105ಕ್ಕೆ ಕುಸಿಯುತ್ತದೆ. ವಿಧಾನಸಭೆಯ ಶಾಸಕರ ಸಂಖ್ಯೆ 211ಕ್ಕೆ ಇಳಿಯುತ್ತದೆ. ಆಗ ಬಹುಮತಕ್ಕೆ 106 ಸಾಕು. ಇಬ್ಬರು ಪಕ್ಷೇತರರು ಬೆಂಬಲ ನೀಡಿರುವ ಕಾರಣ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬಹುದು. ಆದರೂ, ಇದು ಸುಲಭದ ಮಾತಲ್ಲ. ಎಲ್ಲರೂ ಹೈಕಮಾಂಡ್ ಸೂಚನೆಯಂತೆ ನಡೆಯುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.