ADVERTISEMENT

‘ಮೈತ್ರಿ’ ಕೂಟಕ್ಕೆ ಆತಂಕ ತಂದ ಬಿಎಸ್‌ಪಿ ನಡೆ

ರತ್ನಪ್ರಭಾ ಕಣಕ್ಕೆ ಇಳಿಸಲು ತಯಾರಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:15 IST
Last Updated 9 ಮಾರ್ಚ್ 2019, 19:15 IST
   

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಿರುವುದು ರಾಜ್ಯದ ಆಡಳಿತಾರೂಢ ಮೈತ್ರಿಕೂಟಕ್ಕೆ ಆತಂಕ ತರುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಿರಿಯ ವಕೀಲ ಸಿ.ಎಸ್. ದ್ವಾರಕನಾಥ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್ ಘೋಷಿಸಿದ್ದಾರೆ.

ಅದರ ಬೆನ್ನಲ್ಲೇ, ಇನ್ನಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ತಯಾರಿಯನ್ನೂ ಪಕ್ಷ ನಡೆಸಿದೆ.

ADVERTISEMENT

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರನ್ನು ಭೇಟಿಯಾಗಿದ್ದ ಬಿಎಸ್‌ಪಿ ಪ್ರಮುಖರು,ಎನ್‌. ಮಹೇಶ್ ಪ್ರತಿನಿಧಿಸುತ್ತಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೋರಿದ್ದಾರೆ

‘ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ರತ್ನಪ್ರಭಾ ಒಲವು ತೋರಲಿಲ್ಲ. ಬೀದರ್‌ ಅಥವಾ ಗುಲಬರ್ಗಾ ಕ್ಷೇತ್ರ ವ್ಯಾಪ್ತಿಯಲ್ಲಿ ರತ್ನಪ್ರಭಾ ಅವರು ಹಲವಾರು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲಿ ಹೆಚ್ಚು ಪರಿಚಿತರೂ ಆಗಿದ್ದಾರೆ. ಹೀಗಾಗಿ ಬೀದರ್ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಆದೀತು ಎಂಬ ಸಲಹೆಯನ್ನೂ ನೀಡಿದ್ದೇವೆ’ ಎಂದು ಬಿಎಸ್‌ಪಿ ಪ್ರಮುಖರೊಬ್ಬರು ತಿಳಿಸಿದರು.

‘ಬಿಎಸ್‌ಪಿಗೆ ಬರುವಂತೆ ಆಮಂತ್ರಣ ನೀಡಿದ್ದು ಹೌದು. ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ’ ಎಂದು ರತ್ನಪ್ರಭಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮತ ಹಂಚಿ ಹೋಗುವ ಭಯ: ಲೋಕಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಷ್ಟು ಬಲ ಬಿಎಸ್‌ಪಿಗೆ ಇಲ್ಲದೇ ಇದ್ದರೂ ಕಾಂಗ್ರೆಸ್ ಅಥವಾ ಜೆಡಿಎಸ್ ಮತಗಳಲ್ಲಿ ಅಲ್ಪ ಪ್ರಮಾಣದ ಮತಗಳನ್ನು ಸೆಳೆಯುವ ಶಕ್ತಿ ಇರುವುದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಮಿತ್ರಕೂಟ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧಿಸಿದರೆ, ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸವಾಲು ಎದುರಾಗಲಿದೆ ಎಂಬ ಆತಂಕ ಜೆಡಿಎಸ್‌–ಕಾಂಗ್ರೆಸ್ ನಾಯಕರದ್ದಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಎಸ್‌ಪಿ ಸ್ಪರ್ಧಿಸಿತ್ತು. ಬಹುತೇಕ ಕ್ಷೇತ್ರಗಳಲ್ಲಿ ಸರಾಸರಿ ಶೇ 0.45 ರಷ್ಟು ಮತಗಳನ್ನು ಈ ಅಭ್ಯರ್ಥಿಗಳು ಪಡೆದಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ 18 ಕ್ಷೇತ್ರಗಳಲ್ಲಿ ಈ ಪಕ್ಷದ ಹುರಿಯಾಳುಗಳಿದ್ದರು. ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧ್ಯವಾಗಿತ್ತು. ಈ ಎಲ್ಲ ಕ್ಷೇತ್ರಗಳಲ್ಲಿ ಆಗಿದ್ದ ಮತದಾನದ ಪೈಕಿ ಶೇ 3.72ರಷ್ಟು ಮತಗಳು ಬಿಎಸ್‌ಪಿಗೆ ಬಿದ್ದಿದ್ದವು.

2014ರ ಚುನಾವಣೆ: ಬಿಎಸ್‌ಪಿ ಪಡೆದ ಮತ(ಶೇ)

ಚಾಮರಾಜನಗರ;3.07

ಮಂಡ್ಯ;1.88

ಹಾಸನ ;1.65

ಬೀದರ್;1.57

ಗುಲಬರ್ಗಾ;1.57

ಚಿಕ್ಕೋಡಿ;1.35

ರಾಯಚೂರು;1.26

ಮೈಸೂರು;1.18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.