ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ಮಾಡುವುದಕ್ಕಿಂತಲೂ ಟೆಂಡರ್ ಕರೆಯುವ ಬಗ್ಗೆಯೇ ನಿಮಗೆ ಹೆಚ್ಚು ಆಸಕ್ತಿ ಇದ್ದಂತಿದೆ’ ಎಂದು ರಾಜ್ಯ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ‘ಕಸ ವಿಲೇವಾರಿಯ ಪ್ಯಾಕೇಜ್ ಸಮಸ್ಯೆಯನ್ನು ಏನಾದರೂ ಎದುರಿಸುತ್ತಿದ್ದೀರಾ’ ಎಂದು ಕಟುವಾಗಿ ಪ್ರಶ್ನಿಸಿದೆ.
ಸರ್ಕಾರ ಹೊರಡಿಸಿರುವ ಮರು ಟೆಂಡರ್ ಆದೇಶ ಪ್ರಶ್ನಿಸಿದ ಮತ್ತು ಇದೇ ನ್ಯಾಯಪೀಠ ನೀಡಿರುವ ಈ ಮೊದಲಿನ ಆದೇಶಕ್ಕೆ ಸಂಬಂಧಿಸಿದ, ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಸರ್ಕಾರ ಈ ಮೊದಲು ಇದೇ ನ್ಯಾಯಪೀಠಕ್ಕೆ ನೀಡಿದ್ದ ಮುಚ್ಚಳಿಕೆಯನ್ನು ಉಲ್ಲಂಘಿಸಿದೆ ಮತ್ತು ಹೊಸ ಟೆಂಡರ್ ಕರೆಯುವ ಮೂಲಕ ನ್ಯಾಯಾಂಗ ನಿಂದನೆಗೆ ಈಡಾಗಿದೆ’ ಎಂದು ಆರೋಪಿಸಿದರು.
ಇದನ್ನು ಬಲವಾಗಿ ಅಲ್ಲಗಳೆದ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ಅರ್ಜಿದಾರರು ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ ಮತ್ತು ಈ ಹಿಂದಿನ ಹಾಗೂ 2025ರ ಮೇ 28ರಂದು ಕರೆದಿರುವ ಟೆಂಡರ್‌ಗಳು ಒಂದಕ್ಕೊಂದು ಭಿನ್ನವಾಗಿವೆ. ಇವೆರಡನ್ನೂ ಪರಸ್ಪರ ತುಲನೆ ಮಾಡುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸರ್ಕಾರಕ್ಕೆ ಬೆಂಗಳೂರಿನ ಕಸ ವಿಲೇವಾರಿಗಿಂತಲೂ ಹೆಚ್ಚಾಗಿ ಟೆಂಡರ್ ಕರೆಯುವ ಬಗ್ಗೆಯೇ ಉತ್ಸುಕತೆ ಇದ್ದಂತಿದೆ. ಅಷ್ಟೇ ಅಲ್ಲ, ಟೆಂಡರ್ ಕರೆದ ನಂತರ ಕಸ ವಿಲೇವಾರಿಗೆ ಜಾಗ ಹುಡುಕುತ್ತಿರುವಂತಿದೆ’ ಎಂದು ಕುಟುಕಿತು.
‘ಟೆಂಡರ್ ಕರೆದಿರುವ ಪ್ರಕ್ರಿಯೆ ಹೈಕೋರ್ಟ್ ಈ ಮೊದಲು ನೀಡಿರುವ ಆದೇಶ ಮತ್ತು ಸರ್ಕಾರ ತಾನು ನೀಡಿರುವ ಮುಚ್ಚಳಿಕೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಹೊರಡಿಸಿರುವ ಹೊಸ ಟೆಂಡರ್ ಆದೇಶದಲ್ಲಿ ಸರ್ಕಾರ ತನ್ನ ಮಾತನ್ನು ಮೀರಿ ನಡೆದಿರುವುದು ಮೇಲ್ನೋಟಕ್ಕೆ ವೇದ್ಯವಾಗುತ್ತಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ‘ಈ ಕುರಿತಂತೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿ’ ಎಂದು ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರಿಗೆ ಆದೇಶಿಸಿತು.
ಪ್ರಕರಣದ ಪ್ರತಿವಾದಿಗಳಾದ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಕಂಪನಿಯ ತಾಂತ್ರಿಕ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ಘನತ್ಯಾಜ್ಯ ನಿರ್ವಹಣೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿತು.
2025ರ ಏಪ್ರಿಲ್ 22ರಂದು ನೀಡಿರುವ ಆದೇಶದ ಮರು ಪರಿಶೀಲನೆಗೆ ಕೋರಿ, ‘ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಸಂಘ ಹಾಗೂ ಗುತ್ತಿಗೆದಾರರ ಸಂಘ’ದ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಹ್ಮಣ್ಯಂ ಈ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.