ADVERTISEMENT

ಸಂಪುಟ ಪುನಾರಚನೆಯತ್ತ ಚಿತ್ತ | ವರಿಷ್ಠರ ತೀರ್ಮಾನಕ್ಕೆ ಬದ್ಧ: ಬಿ.ಎಸ್. ಯಡಿಯೂರಪ್ಪ

ವರಿಷ್ಠರ ತೀರ್ಮಾನಕ್ಕೆ ಬದ್ಧ: ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 19:32 IST
Last Updated 17 ಸೆಪ್ಟೆಂಬರ್ 2020, 19:32 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಜತೆ ಮಾತುಕತೆ ನಡೆಸಿದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಜತೆ ಮಾತುಕತೆ ನಡೆಸಿದರು.   

ಬೆಂಗಳೂರು: ಸಚಿವ ಸಂಪುಟದಿಂದ ಕೆಲವರನ್ನು ಕೈ ಬಿಟ್ಟು ಎಂಟು ಮಂದಿಯನ್ನು ಸೇರಿಸಿಕೊಳ್ಳುವ ಮೂಲಕ ಸಂಪುಟ ಪುನಾರಚನೆಯ ಪ್ರಸ್ತಾವ ಮುಂದಿಟ್ಟುಕೊಂಡು ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ.

ಪುನಾರಚನೆಗೆ ಒಪ್ಪದೇ ಇದ್ದರೆ ಮೂವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಆಲೋಚನೆ ಅವರದ್ದಾಗಿದೆ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ.

ಎಲ್ಲವೂ ಯಡಿಯೂರಪ್ಪ ಅಂದುಕೊಂಡಂತೆ ನಡೆದರೆ ಇದೇ ಭಾನುವಾರ(ಸೆ.20) ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವ ಸಾಧ್ಯತೆಇದೆ. ಸಂಪುಟದಿಂದ ಕೈಬಿಡಬಹುದಾದ ಸಚಿವರ ಪಟ್ಟಿಯನ್ನೂ ಯಡಿಯೂರಪ್ಪ ತಮ್ಮೊಂದಿಗೆ ಒಯ್ದಿದ್ದಾರೆ.

ADVERTISEMENT

ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಭೇಟಿಗೆ ಶುಕ್ರವಾರ ಸಮಯ ನಿಗದಿಯಾಗಿದೆ.

ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ಬಿಡುಗಡೆಯಾಗಿದ್ದು, ಅವರನ್ನೂ ಭೇಟಿ ಮಾಡುವ ಅಪೇಕ್ಷೆ ಯಡಿಯೂರಪ್ಪ ಅವರದ್ದಾಗಿದೆ. ಶಾ ಭೇಟಿಗೆ ಅವಕಾಶ ಸಿಗದೇ ಇದ್ದರೆ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕಸರತ್ತಿಗೆ ಒಪ್ಪಿಗೆ ಪಡೆಯಲು ಜೆ.ಪಿ. ನಡ್ಡಾ ಮನವೊಲಿಸಲು ಮಧ್ಯಸ್ಥಿಕೆ ವಹಿಸಿ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರ ಬಳಿ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ‘ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಅಥವಾ ಪುನರ್‌ರಚಿಸಬೇಕೆ ಎಂಬ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ವರಿಷ್ಠರ ಯಾವ ಸಲಹೆ ನೀಡುತ್ತಾರೋ ಆ ಪ್ರಕಾರವೇ ನಡೆದುಕೊಳ್ಳುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕ ಮುರುಗೇಶ ನಿರಾಣಿ, ವಿಧಾನಪರಿಷತ್‌ ಸದಸ್ಯರಾದ ಎಚ್‌.ವಿಶ್ವನಾಥ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ದೆಹಲಿಯಲ್ಲಿದ್ದಾರೆ.

ಪ್ರಧಾನಿ ಭೇಟಿ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಶುಕ್ರವಾರ ಬೆಳಿಗ್ಗೆ ಸಮಯ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಅವರು ರಾಜ್ಯದ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಿದ್ದಾರೆ. ಗುರುವಾರ ಸಂಜೆ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್‌ ಅವರ ಜತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಿದರು.

‘ಬೇಡಿಕೆ ಇಡ್ತೇವೆ; ನಿರ್ಧಾರ ಅವರದು’

‘ಸಚಿವ ಸ್ಥಾನಕ್ಕೆ ಬೇಡಿಕೆ ಇಡ್ತೇವೆ. ಅಂತಿಮವಾಗಿ ಯಾರನ್ನು ಮಂತ್ರಿ ಮಾಡಬೇಕು ಎಂಬುದು ಹೈಕಮಾಂಡ್‌ ಮತ್ತು ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ’ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಚಿವ ಸ್ಥಾನ ಕೇಳುವುದು ನಮ್ಮ ಧರ್ಮ, ನಿರ್ಧಾರ ಅವರದು. ಈ ಹಿಂದೆಯೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ಯಡಿಯೂರಪ್ಪ ಜತೆಗೂ ಮಾತನಾಡಿದ್ದೇನೆ. ನನ್ನ ಅನುಭವ ಬಳಸಿಕೊಳ್ಳುವಂತೆ ಕೇಳಿಕೊಂಡಿದ್ದೇನೆ. ಈ ಬಾರಿ ಯಾರನ್ನೂ ಭೇಟಿ ಮಾಡುವುದಿಲ್ಲ. ಶೆಫರ್ಡ್‌ ಆರ್ಗನೈಸೇಷನ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.

‘ಆಕಾಂಕ್ಷಿ ಆದರೆ ಲಾಬಿ ಮಾಡಲ್ಲ’:

‘ನಾನು ಸಚಿವ ಸ್ಥಾನ ಆಕಾಂಕ್ಷಿ. ಆದರೆ, ಅದಕ್ಕಾಗಿ ಲಾಬಿ ಮಾಡುವುದಿಲ್ಲ. ದೆಹಲಿಗೆ ಲಾಬಿ ಮಾಡಲು ಬಂದಿಲ್ಲ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

‘ಯಾರಿಗೇ ಆಗಲಿ ಸಚಿವ ಸ್ಥಾನ ನೀಡುವುದು ಮತ್ತು ಬಿಡುವುದು ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಕಳೆದ ಬಾರಿ ಮಂತ್ರಿ ಆಗಿದ್ದಾಗ ಸಮರ್ಥವಾಗಿ ಕೆಲಸ ಮಾಡಿದ್ದೇನೆ’ ಎಂದರು.

ಯಾರಿಗೆಲ್ಲ ಸಚಿವ ಸ್ಥಾನದ ಅವಕಾಶ?:

ವಿಧಾನ ಪರಿಷತ್ತಿನಿಂದ ಎಂ.ಟಿ.ಬಿ. ನಾಗರಾಜ್‌, ಆರ್. ಶಂಕರ್, ವಿಧಾನಸಭೆಯಿಂದ ಉಮೇಶ ಕತ್ತಿ, ಎಸ್. ಅಂಗಾರ, ಜಿ.ಎಚ್‌.ತಿಪ್ಪಾರೆಡ್ಡಿ, ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್‌, ಎಂ.ಪಿ. ರೇಣುಕಾಚಾರ್ಯ ಹೆಸರು ಯಡಿಯೂರಪ್ಪನವರ ಆಲೋಚನೆಯಲ್ಲಿದೆ. ಬಸನಗೌಡ ಪಾಟೀಲ ಯತ್ನಾಳ ಒಪ್ಪಿದರೆ ಅವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. ಖಾಲಿ ಇರುವ ಐದು ಸ್ಥಾನಗಳ ಜತೆ, ನಾಲ್ವರನ್ನು ಕೈಬಿಡುವುದು ಯಡಿಯೂರಪ್ಪ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.