ADVERTISEMENT

ಹೈಕೋರ್ಟ್‌ ಸುದ್ದಿಗಳು | ಪೋಕ್ಸೊ: ಬಿಎಸ್‌ವೈ ವಿರುದ್ಧದ ವಿಚಾರಣೆಗೆ ತಡೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 14:25 IST
Last Updated 14 ಮಾರ್ಚ್ 2025, 14:25 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಾಯ್ದೆ ಅಡಿಯ ದೂರಿಗೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಮುಂದಿನ ನ್ಯಾಯಿಕ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ದೂರನ್ನು, ‘ತನಿಖೆಗೆ ಪರಿಗಣಿಸಬಹುದಾದ ಅಪರಾಧ’ ಎಂದು ನಿರ್ಧರಿಸಿ, ಬೆಂಗಳೂರಿನ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್‌ ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್ ಯೆರೂರು ಶುಕ್ರವಾರ ವಿಚಾರಣೆ ನಡೆಸಿದರು.

ಮುಂದಿನ ಮುದ್ದತಿನವರೆಗೆ ವಿಚಾರಣಾ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಲು ಯಡಿಯೂರಪ್ಪ ಸೇರಿದಂತೆ ಎಲ್ಲಾ ಅರ್ಜಿದಾರರಿಗೂ ವಿನಾಯಿತಿ ನೀಡಿ ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ADVERTISEMENT

ಯಡಿಯೂರಪ್ಪ ಪರ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್‌ ಮತ್ತು ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಯಡಿಯೂರಪ್ಪ ಮತ್ತು ಇತರರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇರುವ ಪೋಕ್ಸೊ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 354ಎ, 204, 214 ಜೊತೆಗೆ 37ರ ಅಡಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ತಡೆ ವಿಧಿಸಿ ಆದೇಶಿಸಿತು.

ಸಾಕ್ಷಿಗಳಿಗೆ ವಿನಯ ಕುಲಕರ್ಣಿ ಬೆದರಿಕೆ ಆರೋಪ

ಬೆಂಗಳೂರು: ‘ಧಾರವಾಡದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ತಮ್ಮ ಅಧಿಕಾರ ಬಳಸಿಕೊಂಡು ಪೊಲೀಸರ ಮೂಲಕ ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಹತ್ಯೆಯಾಗಿರುವ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಅವರ ಅಣ್ಣ ಗುರುನಾಥ ಗೌಡರ್‌ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.

ಯೋಗೀಶ್‌ಗೌಡ ಗೌಡರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿಯನ್ನು ಮೂರನೇ ಬಾರಿಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಮಾನಿಸಿದ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿರುವ ರಿಟ್‌ ಮತ್ತು ಕ್ರಿಮಿನಲ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಗುರುನಾಥಗೌಡ ಗೌಡರ್‌ ಪರ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿ, ‘ಈ ಪ್ರಕರಣದಲ್ಲಿ ಯೋಗಿಶ್‌ಗೌಡ ಗೌಡರ್ ಪತ್ನಿ ಮಲ್ಲವ್ವ ಪ್ರಾಸಿಕ್ಯೂಷನ್‌ಗೆ ಸಹಕರಿಸುತ್ತೇನೆ ಎಂದು ಹಾಕಿರುವ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಬಾರದು. ಮಲ್ಲವ್ವ ಮೊದಲಿನಿಂದಲೂ ಕಾನೂನು ಹೋರಾಟದಲ್ಲಿ ವಿನಯ ಕುಲಕರ್ಣಿ ಪರವಾಗಿಯೇ ಸಹಕರಿಸುತ್ತಿದ್ದಾರೆ. ವಾಸ್ತವದಲ್ಲಿ ಪ್ರಾಸಿಕ್ಯೂಷನ್‌ಗೆ ಸಹಕರಿಸುತ್ತೇನೆ ಎಂದು ಆಕೆಯಿಂದ ಈ ಅರ್ಜಿ ಹಾಕಿಸಿರುವುದೇ ವಿನಯ ಕುಲಕರ್ಣಿ’ ಎಂದು ಆರೋಪಿಸಿದರು.

ಸಿಬಿಐ ಪರ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ವಾದ ಮಂಡಿಸಿ, ‘ಈ ಪ್ರಕರಣದಲ್ಲಿ ಆರೋಪಿ ಮುತ್ತಗಿ ಸ್ವಯಂ ಸ್ಫೂರ್ತಿಯಿಂದ‌ ಮಾಫಿ ಸಾಕ್ಷಿಯಾಗಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ, ಕೋರ್ಟ್‌ ಅವರ ಮಾಫಿಯನ್ನು ಒಪ್ಪಿಕೊಳ್ಳುವ ಮುನ್ನ ಷರತ್ತುಗಳನ್ನು ಒಡ್ಡಿಲ್ಲ ಮತ್ತು ಅವುಗಳಿಗೆ ಆರೋಪಿ ಬದ್ಧವಾಗಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ, ಈ ಪ್ರಕರಣದಲ್ಲಿ ಯಾವುದೇ ಕಾನೂನಾತ್ಮಕ ಲೋಪಗಳು ಇಲ್ಲ’ ಎಂದು ಪ್ರತಿಪಾದಿಸಿದರು.

ವಾದ ಆಲಿಸಿದ ನ್ಯಾಯಪೀಠ, ‘ಹೆಚ್ಚಿನ ವಾದಾಂಶಗಳನ್ನು ಲಿಖಿತವಾಗಿ ಸಲ್ಲಿಸಿ’ ಎಂದು ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿತು.

1 ಗುಂಟೆ ಒತ್ತುವರಿ: 1 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕು ಸೂಸಗಡಿ ಹೋಬಳಿಯ ವೆಂಕಟಾಪುರದ ಸರ್ವೇ ನಂ.102ರಲ್ಲಿ ಸರ್ಕಾರಕ್ಕೆ ಸೇರಿದ 1 ಗುಂಟೆ ಜಮೀನನ್ನು ಒತ್ತುವರಿ ಮಾಡಿ ವಾಸದ ಮನೆ ನಿರ್ಮಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಉಲ್ಲಾಸ ಶಿವರಾಮ ನಾಯ್ಕ ಅವರಿಗೆ ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ ಒಂದು ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ.

ಈ ಸಂಬಂಧ ಭಟ್ಕಳ ತಾಲ್ಲೂಕು ತಹಶೀಲ್ದಾರ್‌ ನೀಡಿದ್ದ ದೂರನ್ನು ವಿಶೇಷ ನ್ಯಾಯಾಲಯದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಮತ್ತು ಕಂದಾಯ ಸದಸ್ಯ ಎಸ್‌.ಪಾಲಯ್ಯ ಅವರಿದ್ದ ಪೀಠವು ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ. ‘ಆರೋಪಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ಕಾನೂನು ಪ್ರಕಾರ ಸಂರಕ್ಷಣೆ ಮಾಡಿ ವರದಿ ಸಲ್ಲಿಸಿ’ ಎಂದು ಭಟ್ಕಳ ತಹಶೀಲ್ದಾರ್‌ ಅವರಿಗೆ ನಿರ್ದೇಶಿಸಿರುವ ಪೀಠವು ‘ಅಪರಾಧಿ ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು’ ಎಂದು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.