ADVERTISEMENT

ಶಾಸಕನಾಗೇ ಇರ್ತೀನಿ– ರಾಮುಲು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:04 IST
Last Updated 26 ಮಾರ್ಚ್ 2019, 19:04 IST

ಚಿತ್ರದುರ್ಗ: ಕೊಪ್ಪಳ ಕ್ಷೇತ್ರದಿಂದ ಕಣಕ್ಕಿಳಿಯುವ ವಿಚಾರವನ್ನು ತಳ್ಳಿಹಾಕಿರುವ ಬಿ. ಶ್ರೀರಾಮುಲು, ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿದ್ದೇನೆ. ಮತ್ತೆ ಲೋಕಸಭೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚನೆ ನೀಡಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಹುಲ್ ಅವರು ತಮ್ಮ ಹೆಸರಿನೊಂದಿಗೆ ಗಾಂಧಿ ಎಂದು ಸೇರಿಸಿಕೊಂಡು ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಮೊದಲು ಗಾಂಧಿ ಎಂಬ ಉಪನಾಮ ತೆಗೆದು ಹಾಕಬೇಕು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಅವರು, ಪ್ರಧಾನಿ ಮೋದಿ ಅವರನ್ನು ಚೋರ ಎಂದು ಕರೆಯುವ ಯೋಗ್ಯತೆ ಹೊಂದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಲೋಕಸಭಾ ಚುನಾವಣೆಯ ಬಳಿಕ ಬಳ್ಳಾರಿಯಲ್ಲಿ ಬಿಜೆಪಿ ಪಲ್ಲಕ್ಕಿ ಏರಲಿದೆ. ದೇಶದಲ್ಲಿ ಕಾಂಗ್ರೆಸ್ ಸೋತು ಚಟ್ಟ ಏರಲಿದೆ. ಚಟ್ಟ ಹೊರಲು ಡಿ.ಕೆ. ಶಿವಕುಮಾರ್ ಸಿದ್ಧರಾಗಲಿ’ ಎಂದು ವ್ಯಂಗ್ಯವಾಡಿದರು.

ತೇಜಸ್ವಿನಿ ಹೆಸರಷ್ಟೇ ಶಿಫಾರಸು– ಯಡಿಯೂರಪ್ಪ: ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ ಹೆಸರನ್ನು ಮಾತ್ರ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

‘ತೇಜಸ್ವಿನಿ ಹೊರತು ಬೇರೆ ಯಾವ ಹೆಸರೂ ಸಮಿತಿ ಎದುರು ಇರಲಿಲ್ಲ. ತೇಜಸ್ವಿ ಸೂರ್ಯ ಹೆಸರನ್ನು ಶಿಫಾರಸು ಮಾಡಿದ್ದು ಯಾರು ಎಂಬುದು ಗೊತ್ತಿಲ್ಲ. ಅವರನ್ನು ಕಣಕ್ಕೆ ಇಳಿಸಿರುವುದು ಹೈಕಮಾಂಡ್‌’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.