ADVERTISEMENT

ವಿಮಾ ಕಂಪನಿ ಜೊತೆ ರಾಜ್ಯ ಸರ್ಕಾರ ಶಾಮೀಲು: ಬಿ.ಎಸ್‌.ಯಡಿಯೂರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 13:14 IST
Last Updated 27 ಜನವರಿ 2019, 13:14 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಚಿತ್ರದುರ್ಗ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಜಿಲ್ಲಾವಾರು ಏಜೆನ್ಸಿ ಹಂಚಿಕೆಯಲ್ಲಿ ವಿಮಾ ಕಂಪನಿಗಳೊಂದಿಗೆ ಶಾಮೀಲಾದ ರಾಜ್ಯ ಸರ್ಕಾರ, ರೈತರಿಗೆ ಸಿಗಬೇಕಾದ ಬೆಳೆ ವಿಮೆಯಲ್ಲಿಯೂ ಅವ್ಯವಹಾರ ನಡೆಸಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ಬರಪೀಡಿತ ಪ್ರದೇಶ ವೀಕ್ಷಿಸಿ ಭಾನುವಾರ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ‘ಜಿಲ್ಲಾವಾರು ವಿಮಾ ಕಂಪನಿ ನೇಮಕ ಮಾಡುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲ. ಬೇಕಾದವರಿಗೆ ಏಜೆನ್ಸಿ ನೀಡಿದ ಸಮ್ಮಿಶ್ರ ಸರ್ಕಾರ, ವಿಮೆ ಹಣವನ್ನೂ ಲೂಟಿ ಮಾಡಿದೆ’ ಎಂದು ದೂರಿದರು.

‘ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ನೀಡುತ್ತಿಲ್ಲ. ಕೂಲಿ ನೀಡಬೇಕಾಗಿರುವ ಕೋಟ್ಯಂತರ ಹಣವನ್ನು ಬಾಕಿ ಉಳಿಸಿಕೊಂಡಿದೆ. ಅನಾಮಧೇಯ ವ್ಯಕ್ತಿಗಳ ಖಾತೆಗೆ ಹಣ ಹೋಗುತ್ತಿದೆ. ಸುಳ್ಳು ಲೆಕ್ಕ ತೋರಿಸಿ ಸರ್ಕಾರವೇ ಹಗಲು ದರೋಡೆ ಮಾಡುತ್ತಿದೆ. ನರೇಗಾ ಯೋಜನೆಯಡಿ ರಾಜ್ಯದಲ್ಲಿ ನಡೆದ ಕಾಮಗಾರಿಯಲ್ಲಿ ಅರ್ಧದಷ್ಟು ದುರ್ಬಳಕೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯ ಭೀಕರ ಬರ ಪರಿಸ್ಥಿತಿಗೆ ತುತ್ತಾಗಿದೆ. ರೈತರು ಬೆಳೆದ ಶೇ 99ರಷ್ಟು ಬೆಳೆ ನಾಶವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈವರೆಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ರೈತರೊಂದಿಗೆ ಸಮಾಲೋಚನೆ ನಡೆಸಿ ವಾಸ್ತವ ಪರಿಸ್ಥಿತಿ ಅರಿಯುವ ಪ್ರಯತ್ನ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಹಳ್ಳಿಗಳಿಗೆ ತೆರಳಿ ರೈತರ ಸಂಕಷ್ಟ ಅರಿತಿಲ್ಲ’ ಎಂದರು.

‘ರಾಜ್ಯ ಸರ್ಕಾರ ₹ 2 ಲಕ್ಷ ಕೋಟಿ ಗಾತ್ರದ ಬಜೆಟ್‌ ರೂಪಿಸಿದೆ. ತೆರಿಗೆ ಹಣ, ಕಂದಾಯ ಕಾಲಕಾಲಕ್ಕೆ ಬೊಕ್ಕಸ ಸೇರುತ್ತಿದೆ. ಆದರೂ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ನೀರಾವರಿ ಯೋಜನೆಗಳು ಸಂಪೂರ್ಣ ನನೆಗುದಿಗೆ ಬಿದ್ದಿವೆ. ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಮುಖ್ಯಮಂತ್ರಿ ಮಾತ್ರ ಉಡಾಫೆ ಉತ್ತರ ನೀಡುತ್ತ ಕಾಲಾಹರಣ ಮಾಡುತ್ತಿದ್ದಾರೆ. ಸರ್ಕಾರ ವೈಫಲ್ಯದ ವಿರುದ್ಧ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.