ADVERTISEMENT

ಲಾಕ್‌ಡೌನ್‌ ತೆರವಿಗೆ ಮನವಿ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 20:51 IST
Last Updated 16 ಜೂನ್ 2020, 20:51 IST
   

ಬೆಂಗಳೂರು: ‘ರಾಜ್ಯದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ. ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿ, ಸಹಜ ಸ್ಥಿತಿ ನೆಲೆಸಲು ಅವಕಾಶ ಮಾಡಿಕೊಡುವಂತೆ ಬುಧವಾರ ನಡೆಯಲಿರುವ ವಿಡಿಯೊ ಸಂವಾದದ ವೇಳೆ ಪ್ರಧಾನಿಗೆ ಮನವಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೋವಿಡ್‌ ಪಿಡುಗು ನಿಯಂತ್ರಣದಲ್ಲಿದೆ. ಇದಕ್ಕಾಗಿ ಹಲವು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ’ ಎಂದರು.

‘ಲಾಕ್‌ಡೌನ್ ನಿರ್ಬಂಧಗಳನ್ನು‌ ಸಡಿಲಗೊಳಿಸಿ ಆರ್ಥಿಕ ಚಟುವಟಿಕೆಗಳಿಗೆ ಇನ್ನಷ್ಟು ಅವಕಾಶ ಕಲ್ಪಿಸುವಂತೆ ಕೋರುತ್ತೇನೆ’ ಎಂದರು.

ADVERTISEMENT

₹ 1 ಸಾವಿರ ಕೋಟಿ ಬಿಡುಗಡೆ: ‘ರಾಜ್ಯದ ಆರ್ಥಿಕ ಸ್ಥಿತಿ ಅಷ್ಟಾಗಿ ಉತ್ತಮವಿಲ್ಲದೇ ಇದ್ದರೂ ಕೊಟ್ಟ ಭರವಸೆಯಂತೆ ಪ್ರತಿಯೊಬ್ಬ ರೈತರ ಖಾತೆಗೆ ತಲಾ₹ 2 ಸಾವಿರ ಜಮೆ ಮಾಡಲು ₹ 1,000 ಕೋಟಿ ಬಿಡುಗಡೆ ಮಾಡಿದ್ದೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

‘ಸುಮಾರು 50 ಲಕ್ಷ ರೈತರಿಗೆ ಇದರ ಪ್ರಯೋಜನ ಸಿಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನಡಿ ಪ್ರತಿ ರೈತನಿಗೂ ವರ್ಷಕ್ಕೆ ₹ 10,000 ಸಿಗುತ್ತದೆ’ ಎಂದರು.

ಇದಕ್ಕೂ ಮೊದಲು, ಕೋವಿಡ್–19 ನಿಯಂತ್ರಣ ಉದ್ದೇಶದಿಂದ ಚಾಮರಾಜಪೇಟೆಯಲ್ಲಿರುವ ಶಂಕರ
ಮಠದಲ್ಲಿ ಹಮ್ಮಿಕೊಂಡಿದ್ದ ಧನ್ವಂತರಿ ಹೋಮದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.