ADVERTISEMENT

ತೆಂಗಿನ ಮರಗಳಿಗೆ ವಿಮೆ ಕಲ್ಪಿಸಿ: ಬಿಜೆಪಿಯ ಚಿದಾನಂದ್‌ ಎಂ.ಗೌಡ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 15:59 IST
Last Updated 27 ಜನವರಿ 2026, 15:59 IST
<div class="paragraphs"><p> ತೆಂಗಿನ ಮರ </p></div>

ತೆಂಗಿನ ಮರ

   

ಬೆಂಗಳೂರು: ‘ರಾಜ್ಯದ ತುಮಕೂರು, ಹಾಸನ ಮತ್ತು ಮಂಡ್ಯದಲ್ಲಿ ತೆಂಗನ್ನು ಪ್ರಧಾನವಾಗಿ ಬೆಳೆಯಲಾಗುತ್ತಿದ್ದು, ಈಚಿನ ವರ್ಷಗಳಲ್ಲಿ ವಿವಿಧ ರೋಗಗಳಿಗೆ ಮರಗಳು ಬಲಿಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ತೆಂಗಿಗೂ ವಿಮೆ ಸೌಲಭ್ಯ ಕಲ್ಪಿಸಬೇಕು’ ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಚಿದಾನಂದ್‌ ಎಂ.ಗೌಡ ಒತ್ತಾಯಿಸಿದರು.

ಚಿದಾನಂದ್‌ ಅವರು ಕೇಳಿದ್ದ ಪ್ರಶ್ನೆಗೆ ತೋಟಗಾರಿಕೆ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಪರವಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಉತ್ತರಿಸಿದರು. ತೆಂಗು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಚಿದಾನಂದ್‌ ಅವರು, ‘ಕೆಂಪುಮೂತಿ ಹುಳು ಬಾಧೆ ಮತ್ತು ಅಣಬೆ ರೋಗವು ತೆಂಗಿನ ಮರಗಳನ್ನು ಬಾಧಿಸುತ್ತಿವೆ. ಮರಗಳು ಸಾಯುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘10–12 ವರ್ಷ ಬೆಳೆಸಿ, ಉತ್ತಮ ಇಳುವರಿ ನೀಡುತ್ತಿರುವ ಮರಗಳು ಸಾಯುತ್ತಿವೆ. ಇದಕ್ಕೆ ಸರ್ಕಾರದಿಂದ ಪರಿಹಾರವೂ ಸಿಗುತ್ತಿಲ್ಲ. ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದೆ. ಅಡಿಕೆ ಮರಗಳಿಗೆ ಒದಗಿಸುತ್ತಿರುವ ವಿಮೆ ಸೌಲಭ್ಯವನ್ನು ತೆಂಗಿನ ಮರಗಳಿಗೂ ವಿಸ್ತರಿಸಿ’ ಎಂದರು.

ಸಚಿವ ಚಲುವರಾಯಸ್ವಾಮಿ, ‘ಈ ಬಗ್ಗೆ ಪರಿಶೀಲನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.