ADVERTISEMENT

ಬಜೆಟ್ ಅನುದಾನದ ಶ್ವೇತಪತ್ರ ಹೊರಡಿಸಲಿ: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 13:57 IST
Last Updated 2 ಫೆಬ್ರುವರಿ 2026, 13:57 IST
ನಳಿನ್ ಕುಮಾರ್ ಕಟೀಲ್ – ಪ್ರಜಾವಾಣಿ ಚಿತ್ರ
ನಳಿನ್ ಕುಮಾರ್ ಕಟೀಲ್ – ಪ್ರಜಾವಾಣಿ ಚಿತ್ರ   

ಮಂಗಳೂರು: ತಪ್ಪು ನೀತಿ ಮತ್ತು ಜನಪ್ರಿಯರಾಗಲು ಘೋಷಿಸಿದ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಹೀಗಾಗಿ ಬಜೆಟ್ ಬಗ್ಗೆಯೂ ಸಮರ್ಪಕ ಮಾಹಿತಿ ನೀಡಲು ಸರ್ಕಾರ ಸಿದ್ಧವಿಲ್ಲ. ಆದ್ದರಿಂದ ರಾಜ್ಯಕ್ಕೆ ಸಿಕ್ಕಿದ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಬಿಲ್ ಮೊತ್ತ ಪಾವತಿ ಬಾಕಿ ಇದೆ ಎಂಬ ಗುತ್ತಿಗೆದಾರರ ಸಂಘದ ಆರೋಪಕ್ಕೆ ಬಿಲ್ ಬಾಕಿ ಉಳಿಸಿರುವುದು ಬಿಜೆಪಿ ಸರ್ಕಾರ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಗುತ್ತಿಗೆದಾರರ ಬಿಲ್ ಬಾಕಿ ಉಳಿದಿರುವುದು ಮಾತ್ರವಲ್ಲ, ಸ್ವಲ್ಪ ದಿನಗಳಲ್ಲಿ ಸರ್ಕಾರಿ ನೌಕರರಿಗೆ ವೇತನ ಪಾವತಿ ಮಾಡುವುದಕ್ಕೂ ಸರ್ಕಾರದ ಬಳಿ ಹಣ ಇರುವುದಿಲ್ಲ ಎಂದರು.    

ಕೇಂದ್ರ ಸರ್ಕಾರದ ಯಾವ ಯೋಜನೆಯನ್ನೂ ರಾಜ್ಯ ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸಲಿಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಹೈಸ್ಪೀಡ್ ರೈಲು ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ತಕರಾರು ಎತ್ತಿದ್ದಾರೆ. ರೈಲ್ವೆಯ ಎಲ್ಲ ಯೋಜನೆಗಳೂ ಕೇಂದ್ರ ಮತ್ತು ರಾಜ್ಯದ 50:50ರ ಅನುದಾನದಲ್ಲಿ ಜಾರಿಗೆ ಬರುತ್ತವೆ. ಹೀಗಿರುವಾಗ ಹೈಸ್ಪೀಡ್ ರೈಲಿಗೆ ಕೇಂದ್ರ ಶೇ 90ರಷ್ಟು ಹಣ ಕೊಡಬೇಕು ಎಂದು ಹೇಳಲು ಹೇಗೆ ಸಾಧ್ಯ ಎಂದು ನಳಿನ್ ಪ್ರಶ್ನಿಸಿದರು. 

ADVERTISEMENT

ಜಿಎಸ್‌ಟಿ ಮತ್ತು ಕೇಂದ್ರದ ಅನುದಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಾಗ ಅಸಮಾಧಾನ ವ್ಯಕ್ತಪಿಸುತ್ತಿರುತ್ತಾರೆ. ಅವರು ಜಿಎಸ್‌ಟಿ ಮಂಡಳಿಯ ಸಭೆಗಳಿಗೆ ಹಾಜರಾಗುವುದಿಲ್ಲ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಶ್ನೆಗಳಿಗೆ ಉತ್ತರಿಸುವುದೂ ಇಲ್ಲ ಎಂದು ಅವರು ದೂರಿದರು. 

ಮುಖ್ಯಮಂತ್ರಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ಹಗ್ಗಜಗ್ಗಾಟದಿಂದಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ವಿಳಂಬ ಆಗುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.