ADVERTISEMENT

ಕಟ್ಟಡ ನಕ್ಷೆ: ಶೇ 15ರಷ್ಟು ಉಲ್ಲಂಘನೆಯಾಗಿದ್ದರೆ ಸಕ್ರಮ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 16:50 IST
Last Updated 24 ಜುಲೈ 2025, 16:50 IST
   

ಬೆಂಗಳೂರು: ಕಟ್ಟಡ ನಕ್ಷೆಯನ್ನು ಶೇ 15ರಷ್ಟು ಉಲ್ಲಂಘಿಸಿರುವ ನಿರ್ಮಾಣಗಳನ್ನು ಸಕ್ರಮಗೊಳಿಸಲು ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಕಾಯ್ದೆ– (ಕೆಎಂಸಿ) 1976ಗೆ ತಿದ್ದುಪಡಿ ತಂದು, ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಈ ತಿದ್ದುಪಡಿ ಅನ್ವಯವಾಗಲಿದೆ. ಕೆಎಂಸಿ–1976ರ ಉಪ ಪ್ರಕರಣ 1ರ ಸೆಕ್ಷನ್‌ 428 ಹಾಗೂ ಕೆಎಂಪಿ–1964ರ ಉಪ ಪ್ರಕರಣ 1ರ ಸೆಕ್ಷನ್‌ 325ಕ್ಕೆ ತಿದ್ದುಪಡಿ ತರಲಾಗಿದ್ದು, ‘ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಮಾಡೆಲ್‌ ಬಿಲ್ಡಿಂಗ್‌ (ತಿದ್ದುಪಡಿ) ಬೈ–ಲಾ 2025 ಅನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಬಗೆಗಿನ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 30 ದಿನ ಅವಕಾಶ ನೀಡಲಾಗಿದೆ.

ಕಟ್ಟಡದ ಅನುಮೋದಿತ ನಕ್ಷೆಗಿಂತ ಶೇ 15ರಷ್ಟು ಉಲ್ಲಂಘನೆಯಾಗಿದ್ದರೆ ಅದನ್ನು ಸಕ್ರಮ ಮಾಡಿಕೊಳ್ಳಬಹುದು. ಫ್ಲೋರ್‌ ಏರಿಯಾ ರೇಷಿಯೊ (ಎಫ್‌ಎಆರ್) ಮತ್ತು ಕಾರ್‌ ಪಾರ್ಕಿಂಗ್‌ನಲ್ಲಿ ಶೇ 5ರಷ್ಟು ಉಲ್ಲಂಘನೆಯಾಗಿದ್ದರೂ ಅದನ್ನೂ ಸಕ್ರಮಗೊಳಿಸಲು ಬೈ–ಲಾದಲ್ಲಿ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಕಟ್ಟಡಗಳ ಉಲ್ಲಂಘನೆಯನ್ನು ಸ್ಥಳೀಯ ಸಂಸ್ಥೆಗಳ ಆಯುಕ್ತರು ಈ ಬೈ–ಲಾದಂತೆ ಅನ್ವಯವಾಗುವ ಶುಲ್ಕವನ್ನು ಪಾವತಿಸಿಕೊಂಡು ಸಕ್ರಮಗೊಳಿಸಿ, ಪರಿಷ್ಕೃತ ನಕ್ಷೆಯನ್ನು ನೀಡಬೇಕು. ಅನುಮೋದಿತ ಕಟ್ಟಡ ನಕ್ಷೆಯನ್ನು ಪಡೆಯದೆ ಕಟ್ಟಡ ನಿರ್ಮಿಸಿದವರಿಗೆ ಈ ಬೈ–ಲಾ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.