ADVERTISEMENT

ಹೊನ್ನಾಳಿ | ದೇವರ ಕೋಣದ ಡಿಎನ್‍ಎ ಪರೀಕ್ಷೆಗೆ ಪೊಲೀಸರ ಸಿದ್ಧತೆ

ಕೋಣ ಕಳವು ಪ್ರಕರಣ: ಎರಡು ಗ್ರಾಮಗಳ ಮಧ್ಯೆ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 4:20 IST
Last Updated 18 ಅಕ್ಟೋಬರ್ 2019, 4:20 IST
   

ಹೊನ್ನಾಳಿ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದೇವತೆಗೆ ಬಿಟ್ಟಿದ್ದರು ಎನ್ನಲಾದ ಕೋಣನ ಕಳವು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣ ಭೇದಿಸಲು ಪೊಲೀಸರು ಕೋಣನ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ.

ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ವಾರದ ಹಿಂದೆ ಕೋಣ ಪತ್ತೆಯಾಗಿತ್ತು. ಅಲ್ಲಿನ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬೇಲಿಮಲ್ಲೂರು ಗ್ರಾಮಸ್ಥರು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕೋಣ ಯಾವ ಗ್ರಾಮಕ್ಕೆ ಸೇರಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೇಲಿಮಲ್ಲೂರು ಮತ್ತು ಹಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

ADVERTISEMENT

ಈ ನಡುವೆ ಬೇಲಿಮಲ್ಲೂರು ಗ್ರಾಮಸ್ಥರು, ‘ಕೋಣ ನಮ್ಮದೇ ಎನ್ನುವುದಕ್ಕೆ ಪುರಾವೆಗಳಿವೆ. ನಮ್ಮ ಗ್ರಾಮದ ಕೋಣಕ್ಕೆ 8 ವರ್ಷ ವಯಸ್ಸಾಗಿದೆ. ಬೇಕಾದರೆ ಅದಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಿ’ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಹಾರನಹಳ್ಳಿ ಗ್ರಾಮಸ್ಥರು, ‘5 ವರ್ಷಗಳ ಹಿಂದೆ ಕೋಣವನ್ನು ದೇವರಿಗೆ ಬಿಟ್ಟಿದ್ದೆವು. ಎರಡು ವರ್ಷಗಳ ಹಿಂದೆ ಕಾಣೆಯಾಗಿತ್ತು. ಇದೀಗ ಹೊನ್ನಾಳಿಯಲ್ಲಿ ಅದು ಕಂಡುಬಂದಿದ್ದರಿಂದ ನಮ್ಮ ಊರಿಗೆ ವಾಹನದಲ್ಲಿ ಕರೆದುಕೊಂಡು ಬಂದಿದ್ದೇವೆ. ಈ ಕೋಣ ನಮ್ಮದೇ’ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಬೇಲಿಮಲ್ಲೂರು ಗ್ರಾಮದ ಮುಖಂಡರೊಂದಿಗೆ ಸಿಪಿಐ ದೇವರಾಜ್ ಚರ್ಚಿಸಿದರು

ಬೇಲಿಮಲ್ಲೂರು ಗ್ರಾಮಸ್ಥರು, ‘ಈ ಕೋಣದ ತಾಯಿ ಪಕ್ಕದ ಗ್ರಾಮದಲ್ಲಿ ಇನ್ನೂ ಜೀವಂತವಾಗಿದೆ. ಡಿಎನ್‍ಎ ಪರೀಕ್ಷೆ ಮಾಡಿಸಿ’ ಎಂದು ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಮನವಿ ಆಲಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ‘ಇದು ನಮ್ಮ ಮತಕ್ಷೇತ್ರಕ್ಕೆ ಸಂಬಂಧಿಸಿದ ಕೋಣ. ಹೀಗಾಗಿ ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಬೇಕಾದರೆ ಡಿಎನ್‍ಎ ಪರೀಕ್ಷೆಯಾಗಲಿ’ ಎಂದು ಹೇಳಿದ್ದಾರೆ.

ಹೀಗಾಗಿ ಶಾಸಕರ ಸೂಚನೆಯ ಮೇರೆಗೆ ಪೊಲೀಸರು, ‘ಕೋಣನನ್ನು ಹಾರನಹಳ್ಳಿಯಿಂದ (ಪ್ರಕರಣ ತೀರ್ಮಾನವಾಗುವವರೆಗೂ) ಬೇರೊಂದು ಗ್ರಾಮಕ್ಕೆ ಅಥವಾ ಗೋಶಾಲೆಗೆ ತಂದು ಬಿಡಬೇಕು. ಎರಡೂ ಗ್ರಾಮಗಳ ಮುಖಂಡರ ಸಮಕ್ಷಮದಲ್ಲಿ ಡಿಎನ್‍ಎ ಪರೀಕ್ಷೆಗಾಗಿ ಬೇಕಾದ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್‌ಗೆ ಕಳುಹಿಸಿಕೊಡಬೇಕು. ಫಲಿತಾಂಶ ಬಂದ ಕೂಡಲೇ ಸಂಬಂಧಪಟ್ಟ ಗ್ರಾಮಸ್ಥರಿಗೆ ಕೋಣನನ್ನು ಒಪ್ಪಿಸಲಾಗುವುದು’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

‘ಒಂದು ವಾರದೊಳಗೆ ಡಿಎನ್‍ಎ ಪರೀಕ್ಷೆಗೆ ಬೇಕಾದ ಅಂಶಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗುವುದು’ ಎಂದು ಸಿಪಿಐ ದೇವರಾಜ್ ತಿಳಿಸಿದರು.

ಬೇಲಿಮಲ್ಲೂರಿನ ಕೋಣದ ತಾಯಿ ಇನ್ನೂ ಬದುಕಿರುವುದರಿಂದ ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ಕೋಣಕ್ಕಾಗಿ ಗ್ರಾಮಗಳ ನಡುವೆ ಕಿತ್ತಾಟ

ಹೊನ್ನಾಳಿತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದೇವತೆ ಮಾರಿಕಾಂಬ ದೇವಿಗೆ ಹರಕೆಗೆ ಬಿಟ್ಟಿದ್ದ ದೇವರ ಕೋಣವನ್ನು ಹುಡುಕಿಕೊಡುವಂತೆ ಗ್ರಾಮಸ್ಥರು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೇಲಿಮಲ್ಲೂರು ಗ್ರಾಮದಲ್ಲಿ 7 ವರ್ಷಗಳ ಹಿಂದೆ ಮಾರಿಕಾಂಬ ದೇವಿಗೆ ಕೋಣವನ್ನು ಬಿಡಲಾಗಿತ್ತು. ಇಲ್ಲಿಯವರೆಗೂ ಗ್ರಾಮ ಸೇರಿ ಅಕ್ಕ–ಪಕ್ಕದ ಗ್ರಾಮಗಳಲ್ಲಿ ಕೋಣ ಸಂಚರಿಸಿ ಪುನಃ ಗ್ರಾಮಕ್ಕೆ ಬರುತ್ತಿತ್ತು. ಆದರೆ ಮೂರು ದಿನಗಳಿಂದ ಕಾಣಿಸಿಕೊಳ್ಳದೇ ಇರುವುದರಿಂದ ಗ್ರಾಮಸ್ಥರು ಕೋಣದ ಹುಡುಕಾಟ ಆರಂಭಿಸಿದ್ದರು.

ಶನಿವಾರ ಶಿವಮೊಗ್ಗ ತಾಲ್ಲೂಕಿನ ಹಾರ್ನಹಳ್ಳಿ ಗ್ರಾಮದವರು ಕೋಣ ನಮ್ಮೂರಿನದು ಎಂದು ಇದನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ವಿಷಯ ತಿಳಿದ ಯುವಕರು ಗ್ರಾಮಸ್ಥರಿಗೆ ತಿಳಿಸಿದರು. ಕೂಡಲೇ ನೂರಾರು ಜನ ಗ್ರಾಮಸ್ಥರು ಹಾರ್ನಹಳ್ಳಿಗೆ ಹೋಗಿ ಕೋಣವನ್ನು ನೋಡಿ ನಮ್ಮದೆ ಎಂದು ಖಚಿತಪಡಿಸಿಕೊಂಡ ಮೇಲೆ, ಆ ಊರಿನ ಜನರು ಈ ಕೋಣ ನಮ್ಮದು ಎರಡೂವರೆ ವರ್ಷದ ಹಿಂದೆ ಕಳೆದುಹೋಗಿತ್ತು. ಶನಿವಾರ ಹೊನ್ನಾಳಿಯಲ್ಲಿ ಬೀಡುಬಿಟ್ಟಿದ್ದನ್ನು ಕಂಡು ನಮ್ಮೂರಿಗೆ ತಂದಿದ್ದೇವೆ’ ಎಂದು ತಿಳಿಸಿದ್ದಾರೆ.

ಇದರಿಂದ ರೊಚ್ಚಿಗೆದ್ದ ಬೇಲಿಮಲ್ಲೂರು ಗ್ರಾಮಸ್ಥರು ಐದಾರು ವಾಹನಗಳ ಮೂಲಕ ಕೋಣ ತರಲೇಬೇಕು ಎಂದು ಹೊರಟಿದ್ದ ಸಂದರ್ಭದಲ್ಲಿ ಗ್ರಾಮದ ಹಿರಿಯರೊಬ್ಬರು ಅವರನ್ನು ತಡೆದು ಒಂದು ಕೋಣದಿಂದ ಎರಡು ಗ್ರಾಮಗಳ ನಡುವೆ ಘರ್ಷಣೆ ಒಳ್ಳೆಯದಲ್ಲ. ಇದನ್ನು ಕಾನೂನು ರೀತಿಯಲ್ಲಿ ಸರಿಪಡಿಸಿಕೊಳ್ಳುವುದು ಉತ್ತಮ ಎಂದು ಸಮಾಧಾನಪಡಿಸಿದ್ದರಿಂದ ಈ ಕುರಿತು ದೂರನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಯಿತು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.