ADVERTISEMENT

ಕೊಡಗು: ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ ಅಪಘಾತ, ವಿದ್ಯಾರ್ಥಿ ಸಾವು

ಬಳ್ಳಾರಿಯಿಂದ ಕೊಡಗು ಪ್ರವಾಸಕ್ಕೆ ಬಂದಿದ್ದ ಶಾಲಾ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 5:00 IST
Last Updated 29 ಡಿಸೆಂಬರ್ 2018, 5:00 IST
   

ಸುಂಟಿಕೊಪ್ಪ (ಕೊಡಗು ಜಿಲ್ಲೆ): ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ವೊಂದು ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ಎಂಬಲ್ಲಿ ಶನಿವಾರ ಮುಂಜಾನೆ ಅಪಘಾತಕ್ಕೀಡಾದ ಪರಿಣಾಮ ಒಬ್ಬ ವಿದ್ಯಾರ್ಥಿ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಗೆಣಿಕೆಹಾಳ್‌ನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಡಿಕೇರಿಯ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಮುಗಿಸಿ ವಾಪಸ್‌ ಆಗುವಾಗ ಬಸ್ ಅಪಘಾತಕ್ಕೀಡಾಗಿದೆ.

10ನೇ ತರಗತಿ ವಿದ್ಯಾರ್ಥಿ ಎನ್‌.ಯು. ಬಸವರಾಜ್‌ (16) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈತ ಗೆಣಿಕೆಹಾಳ್ ನಿವಾಸಿ ದ್ಯಾವಣ್ಣ ಹಾಗೂ ದೇವಮ್ಮ ಅವರ ಪುತ್ರ.

ADVERTISEMENT

ಗಾಯಗೊಂಡ ವಿದ್ಯಾರ್ಥಿಗಳಾದ ಎಂ. ಮಂಜುನಾಥ್‌, ಮಹಮ್ಮದ್‌ ಫಯಾಜ್‌, ಕೆ. ರಾಜು, ಎಚ್‌. ವೀರೇಶ್‌ ಅವರಿಗೆ ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಜಾನ್ಸನ್‌ ಹಾಗೂ ಅಡುಗೆ ಸಿಬ್ಬಂದಿ ಸಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಬಸ್‌ನಲ್ಲಿದ್ದ ಹೆಚ್ಚುವರಿ ಚಾಲಕ ಪರಾರಿಯಾಗಿದ್ದಾನೆ.

ಬಸ್‌ನಲ್ಲಿದ್ದ ಏಳು ತಿಂಗಳ ಕಂದಮ್ಮ ಧನ್ಯಶ್ರೀ ಅಪಾಯದಿಂದ ‍ಪಾರಾಗಿದ್ದಾಳೆ. ಅಪಘಾತವಾದ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ನೆರವಾದರು. ಎಲ್ಲ ವಿದ್ಯಾರ್ಥಿಗಳನ್ನು ಬಸ್‌ನಿಂದ ಇಳಿಸಿ ರಾಮಮಂದಿರದಲ್ಲಿ ಆಶ್ರಯ ಕಲ್ಪಿಸಲಾಯಿತು.

ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಭೇಟಿ ನೀಡಿ ಪರಿಶೀಲಿಸಿದರು. ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟು ಬಸ್‌ನಲ್ಲಿ 48 ವಿದ್ಯಾರ್ಥಿಗಳು, 6 ಮಂದಿ ಶಿಕ್ಷಕರು, ಒಬ್ಬ ‘ಡಿ’ ಗ್ರೂಪ್‌ ಸಿಬ್ಬಂದಿ, ಅಡುಗೆ ಸಿಬ್ಬಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.