ADVERTISEMENT

ನಾಳೆಯಿಂದ ಬಸ್ಸು, ರಿಕ್ಷಾ ಓಡಾಟ, ಮಾಸ್ಕ್ ಕಡ್ಡಾಯ: ಮೆಟ್ರೊ ಸಂಚಾರ ಇಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2020, 8:15 IST
Last Updated 18 ಮೇ 2020, 8:15 IST
ಕೆಎಸ್‌ಆರ್‌ಟಿಸಿ ಬಸ್‌ಗಳು
ಕೆಎಸ್‌ಆರ್‌ಟಿಸಿ ಬಸ್‌ಗಳು   

ಬೆಂಗಳೂರು: ರಾಜ್ಯದಲ್ಲಿನಾಳೆಯಿಂದ (ಮೇ 19) ಕೆಂಪು ವಲಯ ಮತ್ತುಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಡೆ ಸಾರಿಗೆ ನಿಗಮಮತ್ತುಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದೆಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ನಾಳೆಯಿಂದ 200 ಬಸ್‌ಗಳು ಸಂಚಾರ ಆರಂಭಿಸಲಿವೆ. ಅಗತ್ಯ ಗಮನಿಸಿ ಸಂಖ್ಯೆ ಹೆಚ್ಚಿಸಲಾಗುವುದು.ಬಸ್‌ಗಳಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಖಾಸಗಿ ಬಸ್ ಸಂಚಾರಕ್ಕೂ ಅನುಮತಿ ಇದೆ. ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಿದರು.

ಬೆಂಗಳೂರು ಮೆಟ್ರೊ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಆಟೊ,ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಆಟೊಮತ್ತು ಟ್ಯಾಕ್ಸಿಯಲ್ಲಿ ಚಾಲಕ ಸೇರಿಇಬ್ಬರು ಪ್ರಯಾಣಿಕರು, ಮ್ಯಾಕ್ಸಿಕ್ಯಾಬ್‌ನಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಮೇ 31ರವರೆಗೆ 4ನೇ ಹಂತದ ಲಾಕ್‌ಡೌನ್ ಮುಂದುವರಿಯಲಿದೆ.ಕಂಟೇನ್ಮೆಂಟ್ ವಲಯಗಳಲ್ಲಿ ಬಿಗಿ ಭಧ್ರತೆ ಕಲ್ಪಿಸಲಾಗುವುದು. ಕಾನೂನು ಬಾಹಿರ ವರ್ತನೆಯನ್ನು ಸಹಿಸಲು ಆಗುವುದಿಲ್ಲ. ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ಹೊರಡಿಸಿರುವಮಾರ್ಗಸೂಚಿಯ ಬಗ್ಗೆಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ.ಜನರ ಓಡಾಟಕ್ಕೆ ಅನುಕೂಲ ಇರಬೇಕು ಎಂದು ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಅಭಿಪ್ರಾಯಪಟ್ಟರು.ಬಿಎಂಟಿಸಿ, ಕೆಎಸ್ಆರ್‌ಟಿಸಿ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ನೈಋತ್ಯ ಕರ್ನಾಟಕ ಸಾರಿಗೆ ನಿಗಮದ ಬಸ್‌ಗಳೂ ಸಂಚರಿಸಲಿವೆ ಎಂದರು.

ಹೊರ ರಾಜ್ಯಗಳಿಂದ ಬರುವವರಿಗಾಗಿ ಹಂತಹಂತವಾಗಿ ಬಸ್‌ ವ್ಯವಸ್ಥೆ ಮಾಡಲಾಗುವುದು. ಇತರ ರಾಜ್ಯಗಳಿಂದ ಬಂದವರಿಗಾಗಿ ಸಾಮೂಹಿಕ ಕ್ವಾರಂಟೈನ್ ಮಾಡಲು ತೀರ್ಮಾನಿಸಲಾಗಿದೆ.ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಇತರ ರಾಜ್ಯಗಳಿಂದ ಬರುವವರಿಗೆ ಅವಕಾಶ ನೀಡಲಾಗುವುದು. ಸರ್ಕಾರಿ ಬಸ್‌ಗಳಿಗೆ ಅನ್ವಯಿಸುವ ಎಲ್ಲ ನಿಯಮಗಳೂ ಖಾಸಗಿ ಬಸ್‌ಗಳಿಗೂ ಅನ್ವಯಿಸುತ್ತವೆ. ನಿಯಮ ಪಾಲಿಸದಿದ್ದರೆ ಅಧಿಕಾರಿಗಳು ದಂಡ ಹಾಕುತ್ತಾರೆ ಎಂದು ಮಾಹಿತಿ ನೀಡಿದರು.

ನಾಳೆಯಿಂದ ಮಾಲ್, ಸಿನಿಮಾ, ಹೋಟೆಲ್ ಹೊರತುಪಡಿಸಿ ಉಳಿದಎಲ್ಲಾ ಅಂಗಡಿಗಳ್ನು ತೆರೆಯಲು ಅವಕಾಶವಿದೆ. ರಾಜ್ಯದೊಳಗೆ ರೈಲುಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ.ಹೊರ ರಾಜ್ಯಗಳಿಂದ ರೈಲುಗಳು ಬರುವುದಿಲ್ಲ ಎಂದು ವಿವರಿಸಿದರು.

ಕ್ಷೌರದ ಅಂಗಡಿಗಳನ್ನೂ ನಾಳೆಯಿಂದ ತೆರೆಯಬಹುದು.ಇನ್ನು ಮುಂದೆಪ್ರತಿಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇರುತ್ತದೆಎಂದು ಹೇಳಿದರು.

ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶವನ್ನುಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುವುದು. ಅಂಥ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.

ಸಾರಿಗೆ ನಿಗಮಗಳ ಬಸ್‌ಗಳ ಟಿಕೆಟ್ ದರವನ್ನುಸದ್ಯಕ್ಕೆ ಹೆಚ್ಚಿಸುವುದಿಲ್ಲ. ನಿಗಮಗಳಿಗೆ ಆಗುವ ನಷ್ಟವನ್ನು ಸರ್ಕಾರವೇ ಭರಿಸಲಿದೆ. ಹೊಟೆಲ್‌ಗಳಲ್ಲಿ ಪಾರ್ಸೆಲ್ ಕೊಂಡೊಯ್ಯಲು ಅವಕಾಶವಿದೆ. ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ತೆರೆಯಲು ಅವಕಾಶವಿದೆ. ಕ್ರೀಡಾ ಚಟುವಟಿಕೆಗಳಿಗೆ ಅವಕಾಶವಿದೆ. ಆದರೆ ಜಿಮ್ ತೆರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.