ADVERTISEMENT

ಬಸ್ ಗಾಜು ಒಡೆದ ಎಎಸ್‌ಐಗೆ ಡಿಸಿಪಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 20:13 IST
Last Updated 15 ಡಿಸೆಂಬರ್ 2018, 20:13 IST
ಬಸ್ಸಿನ ಕಿಟಕಿಯ ಗಾಜು ಒಡೆದಿರುವುದನ್ನು ಚಾಲಕ ತೋರಿಸಿದರು
ಬಸ್ಸಿನ ಕಿಟಕಿಯ ಗಾಜು ಒಡೆದಿರುವುದನ್ನು ಚಾಲಕ ತೋರಿಸಿದರು   

ಬೆಂಗಳೂರು: ಸಂಚಾರಕ್ಕೆ ನಿರ್ಬಂಧವಿದ್ದರೂ ಮೇಲ್ಸೇತುವೆಯಲ್ಲಿ ಬಸ್‌ ಚಲಾಯಿಸಿಕೊಂಡು ಹೊರಟಿದ್ದ ಚಾಲಕನ ಮೇಲೆ ಕೋಪಗೊಂಡ ಎಎಸ್‌ಐಯೊಬ್ಬರು, ಬಸ್ಸಿಗೆ ಹೆಲ್ಮೆಟ್‌ ಎಸೆದು ಕಿಟಕಿಯ ಗಾಜು ಒಡೆದಿದ್ದಾರೆ.

ಗಾಜು ಒಡೆದಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರುವ ಬಸ್ಸಿನ ಚಾಲಕ, ‘ನಿಯಮ ಉಲ್ಲಂಘನೆಯಾಗಿದ್ದರೆ ದಂಡ ವಿಧಿಸಬೇಕಿತ್ತು. ಅದನ್ನು ಬಿಟ್ಟು ಗಾಜು ಒಡೆದಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.

ಆಗಿದ್ದೇನು?: ಚನ್ನಪಟ್ಟಣ ಡಿಪೊಕ್ಕೆ ಸೇರಿದ್ದ ಬಸ್‌ ಡಿ. 11ರಂದು ಕಲಾಸಿಪಾಳ್ಯ ನಿಲ್ದಾಣದತ್ತ ಹೋಗುತ್ತಿತ್ತು. ಬೆಳಿಗ್ಗೆ 11 ಗಂಟೆ ಸುಮಾರಿಗೆಸಿಲ್ಕ್‌ಬೋರ್ಡ್‌ ಸಮೀಪದ ಅಂಡರ್‌ಪಾಸ್‌ ಬಳಿ ದಟ್ಟಣೆ ಹೆಚ್ಚಿದ್ದ ಕಾರಣ ಚಾಲಕ, ಅಂಡರ್‌ಪಾಸ್‌ ಬದಲು ಮೇಲ್ಸೇತುವೆ ಮೇಲೆ ಬಸ್‌ ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದರು. ಅದೇ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಮಡಿವಾಳ ಸಂಚಾರ ಠಾಣೆಯ ಎಎಸ್‌ಐ ಗಿರಿಯಪ್ಪ, ಬಸ್‌ ನಿಲ್ಲಿಸುವಂತೆ ಕೈ ಮಾಡಿದ್ದರು. ಹಿಂದೆ ವಾಹನಗಳು ಬರುತ್ತಿದ್ದರಿಂದಾಗಿ, ಮುಂದಕ್ಕೆ ಹೋಗಿ ಬಸ್‌ ನಿಲ್ಲಿಸಲು ಚಾಲಕ ಮುಂದಾಗಿದ್ದರು. ಬಸ್ಸಿನ ಹಿಂದೆಯೇ ಓಡಿದ್ದ ಎಎಸ್‌ಐ, ಚಾಲಕನ ಸೀಟಿನ ಕಿಟಕಿಗೆ ಹೆಲ್ಮೆಟ್‌ ಎಸೆದಿದ್ದರು. ಆಗ ಗಾಜು ಒಡೆದಿತ್ತು. ಬಸ್ ನಿಲ್ಲಿಸಿ ಕೆಳಗೆ ಇಳಿದ ಚಾಲಕ, ಎಎಸ್‌ಐ ವರ್ತನೆಯನ್ನು ಪ್ರಶ್ನಿಸಿದ್ದರು.

ADVERTISEMENT

‘ಮೇಲ್ಸೇತುವೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿರ್ಬಂಧಿಸಲಾಗಿದೆ. ಅಷ್ಟಾದರೂ ಬಸ್‌ ಚಲಾಯಿಸಿಕೊಂಡು ಹೋಗುತ್ತಿದ್ದಿಯಾ. ಕೈ ಮಾಡಿದರೂ ನಿಲ್ಲಿಸಿಲ್ಲ. ಹೀಗಾಗಿಯೇ ಹೆಲ್ಮೆಟ್‌ ಎಸೆದೆ. ಬೇಕಾದರೆ, ನನ್ನ ವಿರುದ್ಧ ಠಾಣೆಗೆ ದೂರು ಕೊಡು’ ಎಂದು ಎಎಸ್‌ಐ ಮರು ಉತ್ತರಿಸಿದ್ದರು. ಆಗ ಪರಸ್ಪರ ಮಾತಿನ ಚಕಮಕಿ ಶುರುವಾಗಿತ್ತು.

ಮಧ್ಯಪ್ರವೇಶಿಸಿದ್ದ ಪ್ರಯಾಣಿಕರು, ಪರಿಸ್ಥಿತಿ ತಿಳಿಗೊಳಿಸಿದ್ದರು.

ಡಿಸಿಪಿ (ಸಂಚಾರ) ಜಗದೀಶ್, ಎಎಸ್‌ಐ ಗಿರಿಯಪ್ಪ ಅವರನ್ನು ಕಚೇರಿಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.