ADVERTISEMENT

ಚುನಾವಣೆ ವೇಳೆ ನೇಮಕಾತಿ ಕುರಿತು ರಾಹುಲ್‌ ನೀಡಿದ್ದ ಭರವಸೆ ಏನಾಯ್ತು?: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 16:18 IST
Last Updated 24 ಫೆಬ್ರುವರಿ 2026, 16:18 IST
<div class="paragraphs"><p>ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ</p></div>

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

   

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ವೇಳೆ ರಾಹುಲ್‌ಗಾಂಧಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾಲಿ ಇರುವ 2.85 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಒಂದೇ ಒಂದು ಹುದ್ದೆಯನ್ನು ತುಂಬಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಗ್ಗೆ ರಾಹುಲ್‌ಗಾಂಧಿ ತುಟಿ ಬಿಚ್ಚಲಿ ಎಂದು ಒತ್ತಾಯಿಸಿದರು.

ADVERTISEMENT

ರಾಜ್ಯದಲ್ಲಿ ಕುರ್ಚಿ ಕಾಳಗದಲ್ಲಿ ನಿರತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಯುವ ಜನತೆಯ ಸಮಸ್ಯೆ ಆಲಿಸಲು ಸಮಯ ಸಿಗುತ್ತಿಲ್ಲ. 2.85 ಲಕ್ಷ ಹುದ್ದೆಗಳು ಇವತ್ತಿಗೂ ಖಾಲಿ ಇವೆ. ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು. 

ಮೀಸಲಾತಿ ಗೊಂದಲ ಬಳಸಿಕೊಂಡು ಕಾಂಗ್ರೆಸ್‌ ಸರ್ಕಾರ ಕುಳಿತಿದೆ. ಯುವ ಜನತೆಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಖಾಲಿ ಹುದ್ದೆಗಳ ನೇಮಕ ಮಾಡುವ ಇಚ್ಛಾಶಕ್ತಿಯೂ ಸರ್ಕಾರದಲ್ಲಿ ಕಾಣುತ್ತಿಲ್ಲ ವಿಜಯೇಂದ್ರ ಟೀಕಿಸಿದರು.

ವಿದ್ಯಾರ್ಥಿ ಒಕ್ಕೂಟ ಬೆಂಗಳೂರು, ಕಲಬುರಗಿ, ಧಾರವಾಡದಲ್ಲೂ ಪ್ರತಿಭಟನೆ ಮಾಡಿದ್ದರು. ಇವತ್ತು ಮತ್ತೊಮ್ಮೆ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ. ಒಂದೆಡೆ ಅಭಿವೃದ್ಧಿ ಇಲ್ಲ; ಇನ್ನೊಂದೆಡೆ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ನೇಮಕಾತಿಯನ್ನೂ ಮಾಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದೂ ದೂರಿದರು.

‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 3 ವರ್ಷವಾಗಿದೆ. ಇಷ್ಟು ಸಮಯ ನೇಮಕ ಮಾಡದವರು ಇನ್ಮೇಲೆ ಮಾಡುತ್ತಾರಾ? ಇನ್ನೂ ಎಷ್ಟು ದಿನ ಯುವಜನರ ತಾಳ್ಮೆ ಪರೀಕ್ಷೆ ಮಾಡುತ್ತೀರಿ? ಅವರ ಕಣ್ಣೀರು ಸರ್ಕಾರಕ್ಕೆ ಕಾಣುತ್ತಿಲ್ಲವೇ’ ಎಂದು  ಪ್ರಶ್ನಿಸಿದರು.

‘ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು. ಜತೆಗೆ ಕೆಪಿಎಸ್‌ಸಿ ವ್ಯವಸ್ಥೆ ಸುಧಾರಣೆ ಮಾಡಬೇಕು. ನಿಮ್ಮ ಸರ್ಕಾರ ಇದ್ದಾಗ ಏನು ಮಾಡಿದ್ದೀರಿ ಎಂಬಂಥ ಮಾತುಗಳನ್ನು ಬದಿಗಿಟ್ಟು, ಈಗ ಅಧಿಕಾರದಲ್ಲಿರುವ ನೀವು ಯುವ ಜನತೆಗೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಯುವಜನರ ವಯೋಮಿತಿ ಮೀರುತ್ತಿದೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.