ನವದೆಹಲಿ: ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಮಂಗಳವಾರ ದಿಢೀರ್ ಆಗಿ ನವದೆಹಲಿಗೆ ಧಾವಿಸಿದರು.
ಬಿಜೆಪಿ ರಾಜ್ಯ ಘಟಕದಲ್ಲಿನ ಭಿನ್ನಮತದ ಕಾರಣಕ್ಕೆ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ಆರು ತಿಂಗಳಿಂದ ನನೆಗುದಿಗೆ ಬಿದ್ದಿದೆ. ವಿಜಯೇಂದ್ರ ಮುಂದುವರಿಕೆಗೆ ಭಿನ್ನರ ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಲು ಕೇಂದ್ರ ಸಚಿವ ವಿ.ಸೋಮಣ್ಣ ನಿರಂತರ ಪ್ರಯತ್ನ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಆಕಾಂಕ್ಷೆ ತೋಡಿಕೊಂಡಿದ್ದಾರೆ. ಈ ನಡುವೆ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ತಟಸ್ಥರ ಗುಂಪು ಪ್ರತಿಪಾದಿಸಿದೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರು ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಜ್ಯ ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ಹಗರಣ ಹಾಗೂ ವಿವಾದ ಸೃಷ್ಟಿಸುತ್ತಿದೆ. ಆದರೆ, ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿಲ್ಲ’ ಎಂದು ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರ ಬೆನ್ನಲ್ಲೇ, ಇಬ್ಬರು ನಾಯಕರು ರಾಷ್ಟ್ರ ರಾಜಧಾನಿಗೆ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅಶೋಕ ಬುಧವಾರ ಭೇಟಿ ಮಾಡುವ ಸಾಧ್ಯತೆ ಇದೆ.
‘ರಾಜ್ಯ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಅವರೇ ಮುಂದುವರಿಯುವುದು ಬಹುತೇಕ ಖಚಿತ. ಆದರೆ, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಸೇರಿದಂತೆ ಕೆಲವು ನಾಯಕರನ್ನು ರಾಜ್ಯ ಪದಾಧಿಕಾರಿಗಳನ್ನಾಗಿ ನೇಮಿಸಲು ವರಿಷ್ಠರು ಯೋಜಿಸಿದ್ದಾರೆ. ಈ ಮೂಲಕ ವಿಜಯೇಂದ್ರ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶವೂ ವರಿಷ್ಠರಿಗೆ ಇದೆ. ಈ ಬಗ್ಗೆ ಚರ್ಚಿಸಲು ಉಭಯ ನಾಯಕರನ್ನು ಕರೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಸೋಮವಾರ ಅಥವಾ ಮಂಗಳವಾರ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಯೋಜಿಸಿದ್ದೆವು. ಇದೇ 26ರ ನಂತರ ಭೇಟಿ ಮಾಡುವಂತೆ ರಾಷ್ಟ್ರೀಯ ನಾಯಕರು ತಿಳಿಸಿದ್ದಾರೆ’ ಎಂದು ಭಿನ್ನರ ಬಣದ ನಾಯಕರೊಬ್ಬರು ತಿಳಿಸಿದರು.
‘ವಕೀಲ ಮಿತ್ರರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿರುವೆ. ರಾಜ್ಯಕ್ಕೆ ಬುಧವಾರ ವಾಪಸ್ ಆಗುವೆ. ರಾಷ್ಟ್ರೀಯ ನಾಯಕರ ಭೇಟಿಗೆ ಕಾಲಾವಕಾಶ ಕೇಳಿಲ್ಲ’ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.