ವಿಜಯೇಂದ್ರ, ರಮೇಶ ಜಾರಕಿಹೊಳಿ
ಬೆಳಗಾವಿ: ‘ತನ್ನ ಬೆನ್ನಿಗೆ ನಿಲ್ಲುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಹಿಂದುಳಿದ ಹಾಗೂ ಪರಿಶಿಷ್ಟ ನಾಯಕರಿಗೆ ಬೆದರಿಕೆ ಹಾಕಿದ್ದಾರೆ. ಅವರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ ಸಮುದಾಯದವರೇ ಹೊರತು; ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಸಾಮರ್ಥ್ಯ ವಿಜಯೇಂದ್ರಗೆ ಇಲ್ಲ. ಅವರನ್ನು ಬದಲಾವಣೆ ಮಾಡಲೇಬೇಕು’ ಎಂದು ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಹುಟ್ಟು ಹೋರಾಟಗಾರ. ವಿಜಯೇಂದ್ರ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಸಮನಲ್ಲ. ಜೀನ್ಸ್ ಪ್ಯಾಂಟು- ಟೀಶರ್ಟು ಹಾಕಿಕೊಂಡು ಓಡಾಡುವ ವಯಸ್ಸು ಅವರದ್ದು. ಪಾಪ ಅವರಿಗೆ ರಾಜಕೀಯ ಗೊತ್ತಿಲ್ಲ. ಉತ್ತಮ ಭವಿಷ್ಯವಿದೆ. ಈಗ ಪದವಿ ತ್ಯಾಗ ಮಾಡಲಿ’ ಎಂದೂ ಹೇಳಿದರು.
‘ಬಿಜೆಪಿಯ ಶೇ 70ರಷ್ಟು ಶಾಸಕರು ನನ್ನ ಸ್ನೇಹಿತರಾಗಿದ್ದಾರೆ. ಆದರೆ, ಮುಕ್ತವಾಗಿ ನಿಲುವು ಪ್ರಕಟಿಸಲು ಅವರಿಗೆ ಆಗುತ್ತಿಲ್ಲ. ‘ಹಿಂದೆ ಸರಿಯಿರಿ’ ಎಂದು ಎಲ್ಲ ಶಾಸಕರು ನಮಗೆ ಹೇಳಿದರು ನಾವೂ ಹಿಂದೆ ಸರಿಯುತ್ತೇವೆ’ ಎಂದೂ ಪ್ರತಿಕ್ರಿಯಿಸಿದರು.
‘ರೇಣುಕಾಚಾರ್ಯಗೆ ಬೇರೆ ದಾರಿ ಇಲ್ಲ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ವಿಜಯೇಂದ್ರ ಜೊತೆಗಿದ್ದಾರೆ ಅಷ್ಟೇ’ ಎಂದರು.
‘ಬಸನಗೌಡ ಪಾಟೀಲ ಯತ್ನಾಳ ಅಥವಾ ನನ್ನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಾಡಬೇಡಿ. ಒಂದೇ ಸಮುದಾಯಕ್ಕೆ ಸೀಮಿತವಾದ ಅಧ್ಯಕ್ಷ ನಮಗೆ ಬೇಡ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವವರಿಗೆ ಕೊಡಿ. ಯಾರಿಗೆ ಆ ಹುದ್ದೆ ಕೊಡಬೇಕು ಎಂದು ನಾನು ಬಹಿರಂಗವಾಗಿ ಹೇಳಿಲ್ಲ. ಪಕ್ಷದ ಆಂತರಿಕ ಸಭೆಯಲ್ಲಿ ಕೇಳಿದರೆ ನನ್ನ ಅಭಿಪ್ರಾಯ ಹೇಳುತ್ತೇನೆ’ ಎಂದೂ ಆಗ್ರಹಿಸಿದರು.
‘ಬಿಜೆಪಿ ಶಿಸ್ತು ಪಾಲನಾ ಸಮಿತಿಯಿಂದ ಯತ್ನಾಳ ಅವರಿಗೆ ಎರಡು ದಿನಗಳ ಹಿಂದೆಯೇ ಷೋಕಾಸ್ ನೋಟಿಸ್ ಬಂದಿದೆ. ಯತ್ನಾಳ ಅವರು ಇನ್ನೂ ಅದನ್ನು ಪಡೆದಿಲ್ಲ. ನಾವಂತೂ ಯತ್ನಾಳ ಬೆನ್ನಿಗೆ ನಿಲ್ಲುತ್ತೇವೆ. ನೋಟಿಸ್‌ಗೆ ತಕ್ಕ ಉತ್ತರ ಕೊಡುವ ಜತೆಗೆ, ಕೇಂದ್ರ ನಾಯಕರ ಮನವೊಲಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಯತ್ನಾಳ ಅವರು ಹೈಕಮಾಂಡ್‌ನ ಮಾತು ಧಿಕ್ಕರಿಸಿದ್ದಾರೆ ಎಂಬುದು ಸುಳ್ಳು. ಭೇಟಿಯಾಗುವಂತೆ ಹೈಕಮಾಂಡ್ ಆದೇಶ ನೀಡಿದ್ದರಿಂದ ದೆಹಲಿಗೆ ಹೋಗಿದ್ದಾರೆ’ ಎಂದು ರಮೇಶ ಹೇಳಿದರು.
‘ನಾವು ಯಾರ ವಿರುದ್ಧವೂ ದೂರು ಕೊಡಲು ದೆಹಲಿಗೆ ಹೋಗುತ್ತಿಲ್ಲ. ಬಿಜೆಪಿ ನಾಯಕರನ್ನು ಭೇಟಿ ಆಗುವುದಿಲ್ಲ. ವಕ್ಫ್ ಮಂಡಳಿ ವಿರುದ್ಧ ಜೆಪಿಎಸ್ ಕಮೀಟಿಗೆ ವರದಿ ಸಲ್ಲಿಸಲು ಹೋಗುತ್ತಿದ್ದೇವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.