ಕೆಲದಿನಗಳಿಂದ ತಣ್ಣಗಾಗಿದ್ದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣ ನಡುವಿನ ವಾಕ್ಸಮರ ಮತ್ತೆ ಜೋರಾಗಿದೆ. ವಿಜಯೇಂದ್ರ ಮತ್ತು ಅವರ ಬೆಂಬಲಿಗರು ಕೊಟ್ಟ ಎಚ್ಚರಿಕೆಯಿಂದ ರೊಚ್ಚಿಗೆದ್ದಿರುವ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಪಕ್ಷದ ಅಧ್ಯಕ್ಷರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಕಲೆಕ್ಷನ್ ಮಾಸ್ಟರ್: ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ‘ವಿಜಯೇಂದ್ರ ಕಲೆಕ್ಷನ್ ಮಾಸ್ಟರ್. ಪಕ್ಷದ ಅಧ್ಯಕ್ಷರಾಗಿ ಏನು ಮಾಡಿದ್ದಾರೆ? ಸುಡುಗಾಡು ಮಾಡಿಲ್ಲ. ಜವಾಬ್ದಾರಿ ನಿಭಾಯಿಸದಿದ್ದರೆ ರಾಜೀನಾಮೆ ಕೊಡಲಿ. ನಮ್ಮ ಕೈಯಲ್ಲಿ ಏನಾದರೂ ಪಕ್ಷ ಸಿಕ್ಕರೆ 130 ಸ್ಥಾನಗಳನ್ನು ತರುತ್ತೇವೆ. ಇಲ್ಲವಾದಲ್ಲಿ ನಾವು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧರಿದ್ದೇವೆ. ಇಂತಹ ತಾಕತ್ತು ಇದ್ದರೆ ಬಾ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ರಮೇಶ ಜಾರಕಿಹೊಳಿ ಕಾರಣ. ಅವರು ಸೇರಿ 17 ಜನ ಬಿಜೆಪಿಗೆ ಬರದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದರಾ? ರಮೇಶ ಜಾರಕಿಹೊಳಿ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು’ ಎಂದರು.
‘ರಮೇಶ ಜಾರಕಿಹೊಳಿ ವಾಲ್ಮೀಕಿ ಸಮುದಾಯದ ನಾಯಕರು, ನೀರಾವರಿ ಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದರು. ಅವರನ್ನು ಬಲಿ ಕೊಡುವಲ್ಲಿ ನಿಮ್ಮ ಪಾಲಿನ ಬಗೆಗೂ ಗೊತ್ತಿದೆ’ ಎಂದರು.
‘17 ಜನ ಬಂದಿದ್ದರಿಂದಲೇ ಸರ್ಕಾರ ಬಂತು. ನೀವು ಇಷ್ಟೆಲ್ಲ ದುಡ್ಡು ಮಾಡಲು ರಮೇಶ ಅವರೇ ಕಾರಣ. ನೀವು ಎಷ್ಟು ದುಡ್ಡು ಮಾಡಿದ್ದೀರಿ ಎಂದು ಇಡೀ ಜಗತ್ತಿಗೆ ಗೊತ್ತಿದೆ. ಉಮೇಶ್ ಮನೆಯಲ್ಲಿ ಇ.ಡಿಗೆ ಎರಡು ಹಣ ಎಣಿಕೆಯ ಯಂತ್ರಗಳು, ಸಾವಿರಾರು ಕೋಟಿ ರೂಪಾಯಿ ಖರೀದಿ ಬಾಂಡ್‌ಗಳು, ನಗದು ಸಿಕ್ಕಿತ್ತು. ಇದೆಲ್ಲ ಯಾರದ್ದು ವಿಜಯೇಂದ್ರ ಅವರೇ’ ಎಂದು ಪ್ರಶ್ನಿಸಿದರು.
‘ಬಿಜೆಪಿ ರಾಜ್ಯ ಘಟಕಕ್ಕೆ ಚುನಾವಣೆ ನಡೆದಿದ್ದೇ ಆದರೆ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು, ಪಕ್ಷದ ಮೂಲ ಸಿದ್ಧಾಂತಗಳು ಮತ್ತು ಹಿಂದೂಗಳ ರಕ್ಷಣೆ ಹಾಗೂ ವಕ್ಫ್ ವಿರುದ್ಧದ ಹೋರಾಟಕ್ಕೆ ಬಲ ತುಂಬಲು ನಮ್ಮ ಪರವಾಗಿ ಅಭ್ಯರ್ಥಿಯನ್ನು ನಿಲ್ಲಿಸುವ ಗಂಭೀರವಾದ ಚಿಂತನೆ ಇದೆ’ ಎಂದರು.
‘ಬಿಜೆಪಿ ಜಿಲ್ಲಾ ಘಟಕಗಳ ಚುನಾವಣೆಯ ಹೊಣೆಯನ್ನು ಹಾಲಿ ಅಧ್ಯಕ್ಷರಿಗೆ ಕೊಡಬಾರದು. ಪಾರದರ್ಶಕವಾಗಿ ಚುನಾವಣೆ ನಡೆಸುವವರನ್ನು ಅಥವಾ ಹೊರ ರಾಜ್ಯದವರನ್ನು ಜಿಲ್ಲಾ ಉಸ್ತುವಾರಿಗಳನ್ನಾಗಿ ನೇಮಿಸಬೇಕು ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ ಮನವಿ ಮಾಡುತ್ತೇನೆ’ ಎಂದರು.
ಅಧ್ಯಕ್ಷರ ಆಯ್ಕೆಗೆ ಚುನಾವಣೆ: ಚೌಹಾಣ್ ಸುಳಿವು
ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕೆಂದು ಯತ್ನಾಳ ಬಣ ಪಣ ತೊಟ್ಟಿರುವ ಬೆನ್ನಲ್ಲೇ, ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯುವ ಸಂಭವ ಇದೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಕುರಿತ ಸುಳಿವು ನೀಡಿದ್ದಾರೆ.
‘ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆಗಳು ಶೀಘ್ರ ಆರಂಭವಾಗಲಿವೆ. ರಾಜ್ಯ ಘಟಕದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಚರ್ಚಿಸಿಯೇ ಆಯ್ಕೆ ಮಾಡುತ್ತೇವೆ. ಬೂತ್ ಸಮಿತಿ ಅಧ್ಯಕ್ಷ ಸ್ಥಾನದಿಂದ ರಾಜ್ಯ ಘಟಕದವರೆಗೂ ಚುನಾವಣೆ ನಡೆಯಲಿದೆ ಎಂದರು.
‘ಇನ್ನೂ ಬಚ್ಚಾ, ಅಧ್ಯಕ್ಷನಾಗಲು ಯೋಗ್ಯನಲ್ಲ’
ಅಂಕಲಗಿ (ಬೆಳಗಾವಿ): ‘ವಿಜಯೇಂದ್ರ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಅವನಿಗೆ ನಾನು ಎಚ್ಚರಿಕೆ ಕೊಡುತ್ತೇನೆ. ನೀನು ಇನ್ನೂ ಬಚ್ಚಾ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಲು ಯೋಗ್ಯನಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ತಿರುಗೇಟು ನೀಡಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ನಾನು ನಿಮ್ಮ ಅಪ್ಪನನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಬಿಜೆಪಿಗೆ ಬಂದಿದ್ದೆ. ನನ್ನ ಕ್ಷೇತ್ರದ ಜನ ನನ್ನೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಯಾರ ಭಯವೂ ಇಲ್ಲ. ಯಡಿಯೂರಪ್ಪ ಬಗ್ಗೆ ಅಪಾರ ಗೌರವವಿದೆ. ಈಗಲೂ ಅವರೇ ನಮ್ಮ ನಾಯಕ. ಆದರೆ, ನಾಯಕನಾಗುವ ಯೋಗ್ಯತೆ ನಿನಗೆ ಇಲ್ಲ. ಅದಕ್ಕಾಗಿಯೇ ನಿನ್ನನ್ನು ಕೆಳಗಿಳಿಸಲು ಹೋರಾಡುತ್ತಿದ್ದೇವೆ’ ಎಂದರು.
‘ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ರಾಜ್ಯದಲ್ಲಿ ಓಡಾಡುವುದು ಕಷ್ಟವಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾನೆ. ನಾನು ನೇರಾನೇರ ಚಾಲೆಂಜ್ ಮಾಡುತ್ತಿದ್ದೇನೆ. ವಿಜಯೇಂದ್ರ ನೀನು ದಿನಾಂಕ ಫಿಕ್ಸ್ ಮಾಡಿ ಹೇಳು. ಶಿಕಾರಿಪುರದಲ್ಲೇ ಪ್ರವಾಸ ಮಾಡುತ್ತೇನೆ’ ಎಂದೂ ಸವಾಲು ಹಾಕಿದರು.
‘ನಾನು ರಕ್ಷಣೆಗೆ ಪೊಲೀಸ್ ಪಡೆ ಅಥವಾ ಗನ್ ತರುವುದಿಲ್ಲ. ಒಬ್ಬನೇ ಬರುತ್ತೇನೆ. ಆ ತಾಕತ್ತು ನನಗಿದೆ. ಆದರೆ, ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ಮಾಡುವ ತಾಕತ್ತನ್ನೂ ದೇವರು ನನಗೆ ಕೊಟ್ಟಿದ್ದಾನೆ’ ಎಂದೂ ತಿರುಗೇಟು ನೀಡಿದರು.
‘ಯಡಿಯೂರಪ್ಪ ಅವರಿಗೂ ನಾನು ಹೇಳುವುದು ಒಂದೇ; ವಿಜಯೇಂದ್ರನ ಬೆನ್ನು ಹತ್ತಿ ಹಾಳಾಗುತ್ತಿದ್ದೀರಿ. ಬಿಜೆಪಿ ರಾಜ್ಯ ಘಟಕಕ್ಕೆ ಒಳ್ಳೆಯ ಅಧ್ಯಕ್ಷ ಬರಲು ಅವಕಾಶ ಕೊಡಿ. ಅವರಿಗೆ ಮಾರ್ಗದರ್ಶನ ಮಾಡಿ. ನಿಮ್ಮಿಂದ ಪಕ್ಷಕ್ಕೆ ಒಳ್ಳೆಯದಾಗಿದೆ. ಆದರೆ, ನೀವು ಪಕ್ಷದಿಂದ ಸಾವಿರಪಟ್ಟು ಲಾಭ ಪಡೆದಿದ್ದೀರಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.