ADVERTISEMENT

ದೇವೇಗೌಡ, ಸಿದ್ದರಾಮಯ್ಯ ಜಂಟಿ ಪ್ರವಾಸ

ಇಂದಿನಿಂದ ಮೂರು ಪಕ್ಷಗಳ ಪ್ರಚಾರ ಭರಾಟೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 4:42 IST
Last Updated 22 ಅಕ್ಟೋಬರ್ 2018, 4:42 IST
   

ಬೆಂಗಳೂರು: ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮಿತ್ರ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಎಚ್‌.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಜಂಟಿ ಪ್ರಚಾರ ನಡೆಸಲಿದ್ದಾರೆ.

ಉಪಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಮಣಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರನ್ನು ತಮ್ಮ ಜತೆಗೆ ಪ್ರಚಾರಕ್ಕೆ ಕರೆದೊಯ್ಯಲು ದೇವೇಗೌಡ ನಿರ್ಧರಿಸಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ರಾಮನಗರ ಮತ್ತು ಮಂಡ್ಯ ಕ್ಷೇತ್ರಗಳು ತಮಗೆ ಸುಲಭದ ತುತ್ತಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ನೆರವಿನಿಂದ ಗೆದ್ದುಕೊಳ್ಳುವ ಮೂಲಕ ಆ ಜಿಲ್ಲೆಯಲ್ಲಿ ಪಕ್ಷದ ಬೇರು ಬಿಡಲು ದೇವೇಗೌಡ ಕಾರ್ಯತಂತ್ರ ರೂಪಿಸಿದ್ದಾರೆ. ತಮ್ಮ ಪ್ರಯತ್ನಕ್ಕೆ ಕಾಂಗ್ರೆಸ್‌ ಪಕ್ಷ ಹೆಗಲಿಗೆ ಹೆಗಲು ಕೊಟ್ಟರೆ ಮಾತ್ರ ಗೆಲುವು ಸಾಧ್ಯ ಎಂಬುದು ಗೌಡರ ಲೆಕ್ಕಾಚಾರ.

ADVERTISEMENT

ಈ ಉದ್ದೇಶದಿಂದ ಇದೇ 30 ರಂದು ಶಿವಮೊಗ್ಗದಲ್ಲಿ ಎರಡೂ ಪಕ್ಷಗಳ ನಾಯಕರ ಜಂಟಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ದೇವೇಗೌಡರು ಇದೇ 24 ರಂದು ಲಂಡನ್‌ಗೆ ತೆರಳಲಿದ್ದಾರೆ. ಅಲ್ಲಿಂದ ಮರಳಿದ ನಂತರ ಅಂದರೆ ಇದೇ 27 ರ ಬಳಿಕ ಸಿದ್ದರಾಮಯ್ಯ ಜತೆಗೂಡಿ ಎಲ್ಲ ಕ್ಷೇತ್ರಗಳಿಗೂ ಪ್ರವಾಸ ನಡೆಸಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಲಿದ್ದಾರೆ. ಶಿವಮೊಗ್ಗ, ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಅವರು ಸೋಮವಾರದಿಂದಲೇ ಬಳ್ಳಾರಿ ಕ್ಷೇತ್ರದ ಹಡಗಲಿಯಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಬಳಿಕ ಮಂಡ್ಯ, ಶಿವಮೊಗ್ಗ, ಜಮಖಂಡಿಯಲ್ಲಿ ಪ್ರಚಾರ ನಡೆಸಿ, ಪುನಃ ಇದೇ 28 ಮತ್ತು 29 ರಂದು ಬಳ್ಳಾರಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಳ್ಳಾರಿಯಲ್ಲಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಜಮಖಂಡಿಯಲ್ಲಿ ಪ್ರಚಾರ ನಡೆಸುವ ಕಾರ್ಯಕ್ರಮ ಸದ್ಯ ನಿಗದಿಯಾಗಿದೆ.

ಮುಖ್ಯಮಂತ್ರಿ ಪ್ರವಾಸ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಿವಮೊಗ್ಗ, ರಾಮನಗರ, ಮಂಡ್ಯವನ್ನು ಹೆಚ್ಚು ಕೇಂದ್ರೀಕರಿಸಿ ಪ್ರಚಾರ ಮಾಡಲಿದ್ದಾರೆ. ಬಳ್ಳಾರಿ ಮತ್ತು ಜಮಖಂಡಿಯಲ್ಲಿ ತಲಾ ಒಂದು ದಿನ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಿಂದ 34 ಸ್ಟಾರ್‌ ಪ್ರಚಾರಕರು
‌ಐದು ಕ್ಷೇತ್ರಗಳಲ್ಲಿ ಪ್ರಚಾರಕ್ಕಾಗಿ 34 ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಇನ್ನೆರಡು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಈಗಾಗಲೇ ಶಿವಮೊಗ್ಗ, ಬಳ್ಳಾರಿ, ಜಮಖಂಡಿ ಮತ್ತು ಮಂಡ್ಯ ಕ್ಷೇತ್ರಗಳಿಗೆ ಒಂದು ಸುತ್ತಿನ ಪ್ರಚಾರ ನಡೆಸಿ ಬಂದಿದ್ದಾರೆ. ಮುಂದಿನ ಸುತ್ತಿನ ಪ್ರಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.


ಕಣದಲ್ಲಿ ಉಳಿದ ಪ್ರಮುಖರು
* ರಾಮನಗರ (ವಿಧಾನಸಭೆ):
ಅನಿತಾ ಕುಮಾರಸ್ವಾಮಿ (ಜೆಡಿಎಸ್)
ಎಲ್‌. ಚಂದ್ರಶೇಖರ್ (ಬಿಜೆಪಿ)

* ಜಮಖಂಡಿ (ವಿಧಾನಸಭೆ)
ಆನಂದ ನ್ಯಾಮಗೌಡ (ಕಾಂಗ್ರೆಸ್)
ಶ್ರೀಕಾಂತ ಕುಲಕರ್ಣಿ(ಬಿಜೆಪಿ)

* ಶಿವಮೊಗ್ಗ (ಲೋಕಸಭೆ)
ಬಿ.ವೈ.ರಾಘವೇಂದ್ರ(ಬಿಜೆಪಿ)
ಮಧು ಬಂಗಾರಪ್ಪ (ಜೆಡಿಎಸ್)
ಮಹಿಮ ಪಟೇಲ್ (ಜೆಡಿಯು)

* ಮಂಡ್ಯ(ಲೋಕಸಭೆ)
ಎಲ್.ಆರ್.ಶಿವರಾಮೇಗೌಡ (ಜೆಡಿಎಸ್‌)
ಡಾ.ಸಿದ್ದರಾಮಯ್ಯ (ಬಿಜೆಪಿ)

* ಬಳ್ಳಾರಿ(ಲೋಕಸಭೆ)
ಜೆ.ಶಾಂತಾ (ಬಿಜೆಪಿ)
ವಿ.ಎಸ್.ಉಗ್ರಪ್ಪ(ಕಾಂಗ್ರೆಸ್‌)

ಶನಿವಾರ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿತ್ತು ಬಳ್ಳಾರಿ ಲೋಕಸಭೆ, ಜಮಖಂಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಇಬ್ಬರು ಪಕ್ಷೇತರರು ನಾಮ ಪತ್ರ ಹಿಂದಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.