ADVERTISEMENT

‘ಮೈತ್ರಿ’ ನಾಯಕರಿಗೆ ಮೂರು ಆಯ್ಕೆ ಮುಂದಿಟ್ಟ ‘ಸೈನಿಕ’

ಉಪಚುನಾವಣೆ: ಬಿಜೆಪಿ–ಜೆಡಿಎಸ್‌ ನಾಯಕರ ಸಭೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 23:30 IST
Last Updated 29 ಆಗಸ್ಟ್ 2024, 23:30 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ನವದೆಹಲಿ: ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ–ಜೆಡಿಎಸ್‌ನ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಉಭಯ ಪಕ್ಷಗಳ ನಾಯಕರು ಗುರುವಾರ ರಾತ್ರಿ ಸಭೆ ನಡೆಸಿದರು. 

ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ ಅವರು ತಮ್ಮನ್ನೇ ಕಣಕ್ಕೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿರುವ ಅವರು ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಮನವೊಲಿಸಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸದಲ್ಲಿ ಮೈತ್ರಿ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಜೋಶಿ, ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಆರ್‌. ಅಶೋಕ, ಸಿ.ಎನ್‌. ಅಶ್ವತ್ಥನಾರಾಯಣ, ಸಿ.ಟಿ. ರವಿ ಹಾಗೂ ಅರವಿಂದ ಬೆಲ್ಲದ ಭಾಗಿಯಾಗಿದ್ದರು. ಈ ಸಲ ಯೋಗೇಶ್ವರ್‌ಗೆ ಅವಕಾಶ ನೀಡಬೇಕು ಎಂದು ಬಿಜೆಪಿಯ ಕೆಲವು ನಾಯಕರು ಮನವಿ ಮಾಡಿದರು. ಈ ಪ್ರಸ್ತಾಪಕ್ಕೆ ಕುಮಾರಸ್ವಾಮಿ ಒಪ್ಪಲಿಲ್ಲ. 

ADVERTISEMENT

‘ಉಪಚುನಾವಣೆಯ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಯ ಆಖೈರುಗೊಳಿಸಲು ತರಾತುರಿ ಏಕೆ. ಬಿಜೆಪಿ ವರಿಷ್ಠರ ಜತೆಗೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡೋಣ’ ಎಂದು ಕುಮಾರಸ್ವಾಮಿ ಹೇಳಿದರು. 

‘ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ತನ್ನದೇ ಆದ ಬಲ ಇದೆ. ಕ್ಷೇತ್ರದಲ್ಲಿ ಎರಡು ಸಲ ನಾನು ಗೆದ್ದಿದ್ದೇನೆ. ಒಂದು ಸಲ 3 ಸಾವಿರ ಮತಗಳಿಂದ ಸೋಲಾಗಿದೆ. ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸದೆ ನಿಲುವು ತಿಳಿಸಲು ಸಾಧ್ಯವಿಲ್ಲ. ಜತೆಗೆ, ಪಕ್ಷದ ವೇದಿಕೆಯಲ್ಲೂ ಚರ್ಚೆ ನಡೆಸಬೇಕಿದೆ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 

ಸಭೆ ಬಳಿಕ ಮಾತನಾಡಿದ ಆರ್. ಅಶೋಕ, ‘ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋದರೆ ಇಬ್ಬರಿಗೂ ಲಾಭ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೊರಡಬೇಕು ಎಂದು ಚರ್ಚಿಸಿದ್ದೇವೆ. ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಚುನಾವಣೆ ಗೆಲ್ಲಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ತಿಳಿಸಿದರು.

ಯೋಗೇಶ್ವರ ಆಯ್ಕೆಗಳೇನು?

*ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದಾದರೆ ನಾನು ಆ ಪಕ್ಷದ ಅಭ್ಯರ್ಥಿಯಾಗುತ್ತೇನೆ. 

*ಒಂದು ವೇಳೆ ಜೆಡಿಎಸ್‌ ಪಟ್ಟು ಸಡಿಲಿಸದಿದ್ದರೆ ಬಿಜೆಪಿ ಮೈತ್ರಿ ಮುರಿದುಕೊಳ್ಳಬೇಕು. ತ್ರಿಕೋನ ಸ್ಪರ್ಧೆ ನಡೆಯಲಿದೆ. ಆಗ ಯಾರ ಶಕ್ತಿ ಎಷ್ಟು ಎಂಬುದು ಗೊತ್ತಾಗಲಿದೆ. ನಾನು ಗೆದ್ದು ತೋರಿಸುತ್ತೇನೆ. 

*ಒಂದು ವೇಳೆ ಟಿಕೆಟ್ ನೀಡದಿದ್ದರೆ ನಾನು ಬಿಎಸ್‌ಪಿಯಿಂದ ಸ್ಪರ್ಧಿಸುತ್ತೇನೆ. ಈ ಬಗ್ಗೆ ಬಿಎಸ್‌ಪಿ ನಾಯಕರ ಜತೆಗೆ ಚರ್ಚೆ ನಡೆಸಿದ್ದೇನೆ. ಅವರು ಬಿ–ಫಾರಂ ನೀಡಲು ಒಪ್ಪಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.