ADVERTISEMENT

ಜೆಡಿಎಸ್‌ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 15:47 IST
Last Updated 3 ಆಗಸ್ಟ್ 2022, 15:47 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಬೆಂಗಳೂರು: ಜೆಡಿಎಸ್‌ ರಾಜ್ಯಮಟ್ಟದ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆ ಬುಧವಾರ ಪೂರ್ಣಗೊಂಡಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಅದೇ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಕ್ಷದ ಮುಖಂಡ ಎಚ್‌.ಸಿ. ನೀರಾವರಿ ಸಾಂಸ್ಥಿಕ ಚುನಾವಣೆಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಕಾರ್ಯಕಾರಿಣಿ ಮಂಡಳಿಯ 65 ಸದಸ್ಯರ ಸ್ಥಾನಗಳಿಗೆ ಅಷ್ಟೇ ಸಂಖ್ಯೆಯ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನೀರಾವರಿ ಪ್ರಕಟಿಸಿದರು.

ಇಬ್ರಾಹಿಂ ಅವರಿಗೆ ಆಯ್ಕೆಪತ್ರ ಹಸ್ತಾಂತರಿಸಿದ ಬಳಿಕ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಪಕ್ಷದ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರು ಬಂದಿದ್ದಾರೆ. ಅವರ ನೇತೃತ್ವದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು’ ಎಂದರು.

ADVERTISEMENT

‘ನಮ್ಮ ತಂದೆ ಎಚ್‌.ಡಿ. ದೇವೇಗೌಡರ ಸಮ್ಮುಖದಲ್ಲಿ ಈ ಚುನಾವಣೆ ನಡೆಯಬೇಕಿತ್ತು. ಆದರೆ, ಅನಾರೋಗ್ಯದ ಕಾರಣದಿಂದ ಅವರು ಭಾಗವಹಿಸಲು ಸಾಧ್ಯವಾಗಿಲ್ಲ. 2006ರಲ್ಲಿ ನಾನು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದರಿಂದ ಅವರು ನೊಂದುಕೊಂಡಿದ್ದರು. ಅದೇ ಅವರ ಆರೋಗ್ಯ ಹದಗೆಡಲು ಕಾರಣವಾಯಿತು. ಈಗ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕು ಎಂಬುದು ತಂದೆಯವರ ಕನಸು. ಎಲ್ಲರೂ ಸೇರಿ ಅದನ್ನು ನನಸು ಮಾಡಬೇಕು’ ಎಂದು ಹೇಳಿದರು.

ಭಿನ್ನಮತ ಹೆಚ್ಚಲಿದೆ: ‘ಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ನಲ್ಲಿ ಭಿನ್ನಮತ ಹೆಚ್ಚಲಿದೆ. ಅವರ ಪಕ್ಷದ ದೌರ್ಬಲ್ಯವನ್ನು ಆಧರಿಸಿ ಜೆಡಿಎಸ್‌ ಎಂದೂ ರಾಜಕಾರಣ ಮಾಡುವುದಿಲ್ಲ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.