ADVERTISEMENT

ಲೋಕಾಯುಕ್ತರ ವೇತನ, ಭತ್ಯೆ ಹೆಚ್ಚಳಕ್ಕೆ ಮಸೂದೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 16:25 IST
Last Updated 14 ಸೆಪ್ಟೆಂಬರ್ 2022, 16:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲೋಕಾಯುಕ್ತರ ವೇತನ ಮತ್ತು ಭತ್ಯೆಗಳನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ವೇತನ ಮತ್ತು ಭತ್ಯೆಗಳಿಗೆ ಸರಿಸಮನಾಗಿ ಹೆಚ್ಚಳ ಮಾಡುವುದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಮಸೂದೆ–2022’ಕ್ಕೆ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಲೋಕಾಯುಕ್ತಕ್ಕೆ ಪ್ರಸ್ತುತ ಒಬ್ಬ ರಿಜಿಸ್ಟ್ರಾರ್‌ ಇದ್ದಾರೆ. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತೊಂದು ರಿಜಿಸ್ಟ್ರಾರ್‌ ಹುದ್ದೆಯನ್ನು ಸೃಜಿಸುವುದಕ್ಕೂ ಈ ಮಸೂದೆ ಅವಕಾಶ ಕಲ್ಪಿಸಲಿದೆ. ವಿಧಾನಮಂಡಲದ ಇದೇ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದೆ.

ಸಭಾಪತಿ ಆಯ್ಕೆಗೆ ಚುನಾವಣೆ: ವಿಧಾನ ಪರಿಷತ್‌ ನೂತನ ಸಭಾಪತಿ ಆಯ್ಕೆಗೆ ಮುಂದಿನ ವಾರ ಚುನಾವಣಾ ಪ್ರಕ್ರಿಯೆ ನಡೆಸುವ ತೀರ್ಮಾನವನ್ನೂ ಸಂಪುಟ ಸಭೆ ಕೈಗೊಂಡಿದೆ.

ADVERTISEMENT

ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು

* ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಿರ್ಮಿಸಲು ಅಲ್ಲಿನ ಕುಂದವಾಡ ಗ್ರಾಮದಲ್ಲಿ 53 ಎಕರೆ 19 ಗುಂಟೆ ಜಮೀನನ್ನು ರೈತರಿಂದ ನೇರವಾಗಿ ಖರೀದಿಸಲು ಒಪ್ಪಿಗೆ.

* ಮೈಸೂರು ವೈದ್ಯಕೀಯ ಕಾಲೇಜಿನ ವ್ಯಾಪ್ತಿಯ ಚೆಲುವಾಂಬ ಆಸ್ಪತ್ರೆ ಮತ್ತು ಪಿ.ಕೆ.ಟಿ.ಬಿ. ಆಸ್ಪತ್ರೆಗಳ 14 ಕಟ್ಟಡಗಳ ನವೀಕರಣಕ್ಕೆ ₹ 89 ಕೋಟಿ.

* ಹುಬ್ಬಳ್ಳಿಯಲ್ಲಿ ₹ 250 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ನಿರ್ಮಿಸುವ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ.

* ಬಳ್ಳಾರಿ ನಗರದ ನಲ್ಲಚೆರವು ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗೆ 19 ಎಕರೆ 36 ಗುಂಟೆ ಜಮೀನು ಗುತ್ತಿಗೆಗೆ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ.

* ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಹಂದಾಡಿ– ಕುಮ್ರಗೋಡಿನಿಂದ ಬಾರ್ಕೂರು– ಬೆಣ್ಣೆಕುದ್ರು ಮಧ್ಯದಲ್ಲಿ ಸೀತಾನದಿಗೆ ₹ 160.25 ಕೋಟಿ ವೆಚ್ಚದಲ್ಲಿ ಸೇತುವೆಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಅಂದಾಜುಪಟ್ಟಿಗೆ ಒಪ್ಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.