ADVERTISEMENT

‘ಪೊಲೀಸ್‌ ಗೃಹ–2025’ ಯೋಜನೆಗೆ ಒಪ್ಪಿಗೆ

ಐದು ವರ್ಷದಲ್ಲಿ 10,034 ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 16:45 IST
Last Updated 13 ಜನವರಿ 2021, 16:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಮತ್ತು ಸಬ್‌ ಇನ್‌ಸ್ಪೆಕ್ಟರ್‌ಗಳಿಗಾಗಿ ಐದು ವರ್ಷಗಳಲ್ಲಿ ₹ 2,000 ಕೋಟಿ ವೆಚ್ಚದಲ್ಲಿ 10,034 ವಸತಿ ಗೃಹಗಳನ್ನು ನಿರ್ಮಿಸುವ ‘ಪೊಲೀಸ್‌ ಗೃಹ–2025’ ಯೋಜನೆಗೆ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಐದು ವರ್ಷಗಳ ಅವಧಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಕಾನ್‌ಸ್ಟೆಬಲ್‌ಗಳಿಗಾಗಿ 9,524 ಮತ್ತು ಸಬ್‌ ಇನ್‌ಸ್ಪೆಕ್ಟರ್‌ಗಳಿಗಾಗಿ 510 ವಸತಿ ಗೃಹಗಳನ್ನು ನಿರ್ಮಿಸಲಾಗುವುದು. ರಾಜ್ಯದಾದ್ಯಂತ ಈ ಯೋಜನೆ ಜಾರಿಗೆ ಬರಲಿದೆ’ ಎಂದರು.

₹ 657 ಕೋಟಿ ಸಾಲಕ್ಕೆ ಖಾತರಿ: ಟಾಟಾ ಟೆಕ್ನಾಲಜೀಸ್‌ ಸಹಯೋಗದಲ್ಲಿ ₹ 4,636.5 ಕೋಟಿ ವೆಚ್ಚದಲ್ಲಿ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ)ಗಳ ಆಧುನೀಕರಣ ಮಾಡುವ ಯೋಜನೆಗೆ ರಾಜ್ಯ ಸರ್ಕಾರದ ಪಾಲಿನ ₹ 657 ಕೋಟಿ ಮೊತ್ತಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಖಾತರಿ ನೀಡುವುದಕ್ಕೂ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ADVERTISEMENT

ಇದೇ ಯೋಜನೆಯ ಭಾಗವಾಗಿ 150 ಸರ್ಕಾರಿ ಐಟಿಐಗಳ ಕಟ್ಟಡ ದುರಸ್ತಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ₹ 250 ಕೋಟಿ ವೆಚ್ಚ ಮಾಡುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ ಎಂದರು.

ಗುತ್ತಿಗೆ ಅವಧಿ ವಿಸ್ತರಣೆ: ಹೆಬ್ಬಾಳದಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ ರಾಜ್ಯ ಸರ್ಕಾರದ ಷೇರು ಕಡಿಮೆಯಾಗಿದೆ. ಅದನ್ನು 2030–31ರವರೆಗೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಕೇಂದ್ರಕ್ಕೆ ನೀಡಿರುವ 4 ಎಕರೆ 24.5 ಗುಂಟೆ ಜಮೀನಿನ ಗುತ್ತಿಗೆ ಅವಧಿಯನ್ನು 2031ರವರೆಗೂ ವಿಸ್ತರಿಸುವ ನಿರ್ಧಾರವನ್ನು ಸಂಪುಟ ಸಭೆ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.