ADVERTISEMENT

ಬರ: ಕೇಂದ್ರದಿಂದ ₹ 4,860 ಕೋಟಿ ಪರಿಹಾರ ಕೋರಲು ನಿರ್ಧಾರ

ಕುಡಿಯುವ ನೀರು ಪೂರೈಕೆಗೆ ₹497 ಕೋಟಿ ನೀಡಲು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 20:06 IST
Last Updated 22 ಸೆಪ್ಟೆಂಬರ್ 2023, 20:06 IST
<div class="paragraphs"><p>ಬರ</p></div>

ಬರ

   

ಬೆಂಗಳೂರು: ರಾಜ್ಯದ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿಯಲ್ಲಿ ₹ 4,860 ಕೋಟಿ ನೆರವು ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಎನ್‌ಡಿಆರ್‌ಎಫ್‌ ಅಡಿ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕಂದಾಯ ಇಲಾಖೆ ಸಿದ್ಧಪಡಿಸಿರುವ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ, ಚರ್ಚಿಸಲಾಗಿದೆ. ವರದಿಗೆ ಅನುಮೋದನೆ ನೀಡಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎರಡು– ಮೂರು ದಿನಗಳಲ್ಲಿ ದೆಹಲಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ.

ADVERTISEMENT

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ, ‘ರಾಜ್ಯದಲ್ಲಿ ಬರದಿಂದ ಒಟ್ಟು ₹ 30,432 ಕೋಟಿಯಷ್ಟು ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಇದಕ್ಕಾಗಿ ₹ 4,860 ಕೋಟಿ ನೆರವು ಕೋರಲು ನಿರ್ಧರಿಸಲಾಗಿದೆ’ ಎಂದರು.

39.74 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆಗಳಿಗೆ ಹಾನಿಯಾಗಿದ್ದು, ₹ 27,867.17 ಕೋಟಿ ನಷ್ಟವಾಗಿದೆ. ಇದಕ್ಕೆ ₹ 3,824.67 ಕೋಟಿ ನೆರವು ಕೋರಲು ತೀರ್ಮಾನಿಸಲಾಗಿದೆ. 1.82 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆಗೆ ಹಾನಿಯಾಗಿದ್ದು, ₹ 2,565 ಕೋಟಿ ನಷ್ಟವಾಗಿದೆ. ಈ ಬಾಬ್ತು ₹ 200.39 ಕೋಟಿ ಪರಿಹಾರ ಕೋರಲಾಗುವುದು ಎಂದು ತಿಳಿಸಿದರು.

195 ಪಶು ಶಿಬಿರಗಳಿಗೆ ₹ 104.33 ಕೋಟಿ, 624 ಮೇವು ಬ್ಯಾಂಕ್‌ಗಳಿಗೆ ₹ 126.36 ಕೋಟಿ, ಔಷಧಿಗಾಗಿ ₹ 25 ಕೋಟಿ, ಪೌಷ್ಟಿಕ ಆಹಾರ ಪೂರೈಕೆಗೆ ₹ 25 ಕೋಟಿ, ಮೇವಿನ ಬೀಜಗಳ ‍ಪೂರೈಕೆಗೆ ₹ 50 ಕೋಟಿ ನೆರವು ಕೋರಲು ನಿರ್ಧರಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ 180 ದಿನ ಕುಡಿಯುವ ನೀರು ಪೂರೈಸಲು ₹ 283.04 ಕೋಟಿ ಮತ್ತು ನಗರ ಪ್ರದೇಶಗಳಲ್ಲಿ 180 ದಿನ ಕುಡಿಯುವ ನೀರು ಪೂರೈಕೆಗೆ ₹ 213.98 ಕೋಟಿ ನೆರವು ಕೋರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.