ADVERTISEMENT

ನಡ್ಡಾ ಒಪ್ಪಿದರೆ ಸಂಪುಟ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 19:54 IST
Last Updated 27 ಜನವರಿ 2020, 19:54 IST
   

ಬೆಂಗಳೂರು: ‘ತಿಂಗಳಾಂತ್ಯದೊಳಗೆ ಸಂಪುಟ ವಿಸ್ತರಣೆ ನಡೆಯಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಒಪ್ಪಿಗೆ ಸೂಚಿಸಿದರೆ ಮಾತ್ರ ‘ಅರ್ಹ’ ಶಾಸಕರು ಹಾಗೂ ಬಿಜೆಪಿಯ ಸಚಿವಾಕಾಂಕ್ಷಿಗಳಿಗೆ ಭಾಗ್ಯದ ಬಾಗಿಲು ತೆರೆಯಲಿದೆ.

ಯಡಿಯೂರಪ್ಪ ಭೇಟಿಯಾಗಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ‘ಸಂಭಾವ್ಯ ಸಚಿವರ ಪಟ್ಟಿ ಸಿದ್ಧಪಡಿಸಿಕೊಂಡು ಬನ್ನಿ, ನಡ್ಡಾ ಅವರ ಸಮ್ಮತಿ ಪಡೆದು ವಿಸ್ತರಣೆ ಪ್ರಕ್ರಿಯೆ ಮುಗಿಸಿ’ ಎಂದು ಸಲಹೆ ನೀಡಿದ್ದಾರೆ. ನಡ್ಡಾ ಅವರು ಭೇಟಿಗೆ ಮಂಗಳವಾರ ಸಮಯ ಕೊಟ್ಟರೆ ಅಥವಾ ದೂರವಾಣಿ ಮೂಲಕ ಚರ್ಚಿಸಿ ಸಮ್ಮತಿ ಸೂಚಿಸಿದರೆ ವಿಸ್ತರಣೆ ಬುಧವಾರ (ಜ.29) ನಡೆಯಲಿದೆ. ಇಲ್ಲದಿದ್ದರೆ, ದೆಹಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ವಿಸ್ತರಣೆ ನಡೆಯದು ಎಂದು ಪಕ್ಷದ ಮೂಲಗಳು ಹೇಳಿವೆ.

ಉಪಚುನಾವಣೆ ನಡೆದು 50 ದಿನ ಕಳೆದಿದ್ದು, ಸಂಪುಟ ವಿಸ್ತರಣೆಯ ಒತ್ತಡ ಹೆಚ್ಚುತ್ತಿದೆ.ಸೋತವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ನಾಯಕರು ಈಗಾಗಲೇ ರವಾನಿಸಿದ್ದಾರೆ. ಗೆದ್ದಿರುವ 11 ಜನರ ಪೈಕಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಖಚಿತವಾಗಿಲ್ಲ. ಪಕ್ಷದಲ್ಲಿ ಅಸಮಾಧಾನ ನಿವಾರಿಸಬೇಕಾದರೆ ಅನೇಕ ಬಾರಿ ಪಕ್ಷದ ಚಿಹ್ನೆಯಡಿ ಗೆದ್ದಿರುವ ಹಿರಿಯರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ, ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.

ADVERTISEMENT

ಸಚಿವ ಸ್ಥಾನಕ್ಕಾಗಿ ಬಿಜೆಪಿಯ ಹಿರಿಯರು ಲಾಬಿ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.