ADVERTISEMENT

ಸಂಪುಟ ವಿಸ್ತರಣೆ ಮುನ್ನೆಲೆಗೆ: ಹೆಚ್ಚಲಿದೆ ಆಕಾಂಕ್ಷಿಗಳ ಸಂಖ್ಯೆ

ಎಂಟಿಬಿ, ಶಂಕರ್‌ಗೆ ಖಚಿತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 1:33 IST
Last Updated 20 ಜೂನ್ 2020, 1:33 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕೂ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗುವುದರಿಂದ ಸಚಿವ ಸಂಪುಟ ವಿಸ್ತರಣೆ ಚರ್ಚೆ ಮುನ್ನೆಲೆಗೆ ಬಂದಿದೆ.

ಎಂ.ಟಿ.ಬಿ.ನಾಗರಾಜ್‌ ಮತ್ತು ಆರ್‌.ಶಂಕರ್‌ ಅವರಿಗೆ ಈ ಹಿಂದೆ ನೀಡಿದ ಭರವಸೆಯಂತೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕುರುಬ ಸಮುದಾಯಕ್ಕೆ ಸೇರಿದ ಕೆ.ಎಸ್‌.ಈಶ್ವರಪ್ಪ ಮತ್ತು ಬೈರತಿ ಬಸವರಾಜ್‌ ಅವರುಈಗಾಗಲೇ ಸಚಿವರಾಗಿದ್ದಾರೆ. ನಾಗರಾಜ್‌ ಮತ್ತು ಶಂಕರ್ ಅವರಿಗೆ ಸಚಿವ ಸ್ಥಾನ ನೀಡಿದರೆ ಲಿಂಗಾಯತ, ಒಕ್ಕಲಿಗ ಸಮುದಾಯವನ್ನು ಬಿಟ್ಟರೆ ಮತ್ತೊಂದು ಸಮುದಾಯಕ್ಕೆ ಅಧಿಕ ಸಚಿವ ಸ್ಥಾನಗಳನ್ನು ನೀಡಿದಂತಾಗುತ್ತದೆ ಎಂಬ ಚರ್ಚೆಯೂ ಶುರುವಾಗಿದೆ.

ADVERTISEMENT

ಕುರುಬ ಸಮುದಾಯಕ್ಕೆ ನಾಲ್ಕು ಸಚಿವ ಸ್ಥಾನಗಳನ್ನು ನೀಡಿದರೆ, ಈ ಸಮುದಾಯಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಯೂ ಸಿಕ್ಕಂತಾಗಲಿದೆ. ಯಾವುದೇ ಪಕ್ಷದ ಸರ್ಕಾರ ಇದ್ದಾಗಲೂ ಕುರುಬ ಸಮಾಜಕ್ಕೆ ಹೆಚ್ಚೆಂದರೆ ಎರಡು ಸಚಿವ ಸ್ಥಾನವಷ್ಟೇ ಸಿಕ್ಕಿತ್ತು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಚಿವ ಸ್ಥಾನವನ್ನು ‘ತ್ಯಾಗ’ ಮಾಡಿ ಬಂದಿದ್ದಾರೆ ಮತ್ತು ಪಕ್ಷಕ್ಕೆ ತೆಗೆದುಕೊಳ್ಳುವಾಗಲೂ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು ಎಂಬ ಕಾರಣಕ್ಕೆ ಸಚಿವ ಸ್ಥಾನ ನೀಡಲೇಬೇಕು. ಇದಕ್ಕೆ ವರಿಷ್ಠರ ತಕರಾರು ಇಲ್ಲ’ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟದಲ್ಲಿ ಒಟ್ಟು 5 ಸ್ಥಾನಗಳು ಖಾಲಿ ಇದೆ . ನಾಗರಾಜ್, ಶಂಕರ್‌ ಮತ್ತು ಉಮೇಶ‌ ಕತ್ತಿಗೆ ನೀಡಿದರೆ ಮೂರು ಭರ್ತಿ ಆಗುತ್ತದೆ. ಚುನಾವಣೆ ಫಲಿತಾಂಶ ಪ್ರಶ್ನಿಸಿದ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿಲ್ಲ. ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಅನರ್ಹಗೊಂಡಿರುವ ಈ ಕ್ಷೇತ್ರಗಳ ಮುನಿರತ್ನ
ಹಾಗೂ ಪ್ರತಾಪಗೌಡ ಪಾಟೀಲ ಅವರಿಗಾಗಿ ಎರಡು ಸ್ಥಾನಗಳನ್ನು ಖಾಲಿ ಉಳಿಸಲಾಗುತ್ತದೆಯೋ ಅಥವಾ ಈ ಹೊತ್ತಿನಲ್ಲಿ ಸಂಘ ಪರಿವಾರ ಹಿನ್ನೆಲೆಯ ಶಾಸಕರಿಗೆ ನೀಡಲಾಗುತ್ತದೆಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಸರ್ಕಾರ ಬಂದು ವರ್ಷದ ಬಳಿಕ ಸಚಿವರ ಕಾರ್ಯವೈಖರಿ ಆಧರಿಸಿ ಕೆಲವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ಕೊಡುವ ಚಿಂತನೆ ಪಕ್ಷದಲ್ಲಿತ್ತು.ಅದಕ್ಕೂ ಚಾಲನೆ ಸಿಗಬಹುದು ಎಂಬ ಚರ್ಚೆಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.