ADVERTISEMENT

ಸಚಿವ ಸಂಪುಟ ವಿಸ್ತರಣೆ ಖಚಿತ: ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 15:48 IST
Last Updated 20 ಸೆಪ್ಟೆಂಬರ್ 2020, 15:48 IST
ಎಚ್‌. ವಿಶ್ವನಾಥ್‌
ಎಚ್‌. ವಿಶ್ವನಾಥ್‌   

ಬೆಂಗಳೂರು: ‘ಸಂಪುಟ ವಿಸ್ತರಣೆ ಆಗೇ ಆಗುತ್ತೆ. ಸಂಪುಟದಲ್ಲಿ ನಾವು ಇರ್ತೀವಿ ಅಂದುಕೊಂಡಿದ್ದೇವೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಶಾಸಕರ ಭವನದಲ್ಲಿ ಭಾನುವಾರ ಶೆಫರ್ಡ್ಸ್‌ ಇಂಡಿಯಾ ಇಂಟರ್‌ ನ್ಯಾಷನಲ್‌ ಮುಖಂಡರ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಐವತ್ತು, ಅರವತ್ತು ಜನರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದೇವೆ. ಎಲ್ಲರಿಗೂ ಮಂತ್ರಿ ಸ್ಥಾನ ಸಿಗಲ್ಲ. ರಾಜಕೀಯ ಅಂದರೇನೇ ಅವಕಾಶ. ಸಚಿವ ಆಗಬೇಕು ಅಂತ ಹಠ, ಚಟಕ್ಕೆ ನಾನು ಬಿಜೆಪಿಗೆ ಬಂದಿಲ್ಲ’ ಎಂದರು.

‘ಹಳೆಯ ಪಕ್ಷದಲ್ಲಿದ್ದ ನಾಯಕರ ವಿರುದ್ಧವಾಗಿ ಬಿಜೆಪಿಗೆ ಬಂದವರು ನಾವು. ಯಾರಾದರೂ ಮಂತ್ರಿ ಮಾಡುತ್ತೇನೆ ಬಾ ಅಂತ ಕರೀತಾರಾ? ನನಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಅದಕ್ಕಾಗಿ ನಾವು ದುಂಬಾಲು ಬಿದ್ದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ರಾಜ್ಯದ ಅಭಿವೃದ್ಧಿ, ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದೆಹಲಿಗೆ ಹೋಗಿದ್ದರು. ನಾನೂ ದೆಹಲಿಗೆ ಹೋಗಿ, ಬಂದಿದ್ದೇನೆ. ಇದು ಯಾವ ಶಕ್ತಿ ಪ್ರದರ್ಶನದ ಸಭೆಯೂ ಅಲ್ಲ. ರಾಜಕೀಯ ಸಭೆಯೂ ಅಲ್ಲ. ಕುರುಬ ಸಮುದಾಯವನ್ನು ರಾಷ್ಟ್ರ ಮಟ್ಟದಲ್ಲಿ ಒಂದೆಡೆ ತರುವುದಕ್ಕಾಗಿ ನಡೆಯುತ್ತಿರುವ ಪ್ರಯತ್ನ’ ಎಂದರು.

‘ನನ್ನ ನಡೆ ಶಾಸಕನ ನಡೆ. ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ನಾನು ಶಾಸನ ಸಭೆಯಲ್ಲಿ ಇರುತ್ತೇನೆ’ ಎಂದ ವಿಶ್ವನಾಥ್‌, ಡ್ರಗ್ಸ್‌ ಪ್ರಕರಣ, ಟಿಪ್ಪು ಸುಲ್ತಾನ್‌ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ?

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಎಚ್‌. ವಿಶ್ವನಾಥ್‌ ಅವರು ಬಿಜೆಪಿ ವರಿಷ್ಠರ ಮೇಲೆ ಒತ್ತಡ ತರಲು ರಾಜ್ಯ ಮಟ್ಟದ ಕುರುಬರ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಶೆಫರ್ಡ್ಸ್ ಇಂಡಿಯಾ ಇಂಟರ್‌ ನ್ಯಾಷನಲ್‌ ಸಂಘಟನೆಯ ಐದನೇ ವಾರ್ಷಿಕೋತ್ಸವ ಆಚರಣೆ ಹೆಸರಿನಲ್ಲಿ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಅವರ ಆಪ್ತ ವಲಯದಿಂದಲೇ ಹೊರಬಿದ್ದಿದೆ.

ಆದರೆ, ವಿಶ್ವನಾಥ್‌ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ ಸೇರಿದಂತೆ ಹಲವರು ಭಾನುವಾರದ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.