ADVERTISEMENT

ಸಚಿವಸ್ಥಾನ ಆಕಾಂಕ್ಷಿಗಳ ತೀವ್ರ ಒತ್ತಡ: ಸಂಪುಟ ವಿಸ್ತರಣೆಗೆ ‘ಕೈ’ ಕಸರತ್ತು

ವೇಣುಗೋಪಾಲ್‌– ದಿನೇಶ್ ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 3:06 IST
Last Updated 18 ನವೆಂಬರ್ 2018, 3:06 IST
   

ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆಗೆ ಒತ್ತಡ ಹೆಚ್ಚುತ್ತಿದ್ದಂತೆ, ಆ ಮುಹೂರ್ತ ನಿಗದಿಪಡಿಸಲು ಕೈ ಪಾಳಯದಲ್ಲಿ ಕಸರತ್ತು ಆರಂಭಗೊಂಡಿದೆ.

ಸಂಪುಟದಲ್ಲಿ ಕಾಂಗ್ರೆಸ್‌ ಪಾಲಿಗೆ ಹಂಚಿಕೆಯಾದ ಆರು ಸ್ಥಾನಗಳು ಖಾಲಿ ಇವೆ. ಈ ಸ್ಥಾನಗಳನ್ನು ತುಂಬುವಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ. ತುಂಬದೇ ಇದ್ದರೆ ಅಸಮಾಧಾನ ಸ್ಫೋಟಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಮಧ್ಯೆ, ಈ ತಿಂಗಳ ಒಳಗೇ ಸಂಪುಟ ವಿಸ್ತರಣೆ ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಅದಕ್ಕೆ ಪೂರಕವೆಂಬಂತೆ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಶನಿವಾರ ಭೇಟಿ ಮಾಡಿ ದಿನೇಶ್‌ ಚರ್ಚೆ ನಡೆಸಿದರು.

ADVERTISEMENT

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲವು ಶಾಸಕರು ಕೂಡಾ ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಆದರೆ, ಸಂಪುಟ ವಿಸ್ತರಣೆಗೆ ‘ಕೈ’ ಹಾಕುವುದು ಅಷ್ಟು ಸುಲಭವಲ್ಲ. ಆರು ಸ್ಥಾನಗಳಿಗೆ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲರನ್ನೂ ಸಮಾಧಾನಪಡಿಸಿ, ಅಳೆದೂ ತೂಗಿ ಈ ಕೆಲಸಕ್ಕೆ ಪಕ್ಷದ ರಾಜ್ಯನಾಯಕರು, ವರಿಷ್ಠರು ಮುಂದಾಗಬೇಕು. ಇಲ್ಲದಿದ್ದರೆ, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ ಎನ್ನುವ ಆತಂಕ ಪಕ್ಷಕ್ಕಿದೆ.

ಸೆ. 10ರೊಳಗೆ ಸಂಪುಟ ವಿಸ್ತರಣೆ ಮಾಡುವ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು. ಆದರೆ, ಉಪ ಚುನಾವಣೆ ಕಾರಣಕ್ಕೆ ಮುಂದೂಡಲಾಗಿತ್ತು. ಡಿ. 10ರಿಂದ 10ದಿನಗಳ ಕಾಲ ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯುವುದು ಬಹುತೇಕ ಖಚಿತ. ಅದಕ್ಕೂ ಮೊದಲೇ ಸಂಪುಟ ವಿಸ್ತರಣೆ ಆಗಬೇಕು ಎಂದು ಹಲವರು ಹಕ್ಕೊತ್ತಾಯ ಮಂಡಿಸಿದ್ದಾರೆ.

ವೇಣುಗೋಪಾಲ್ ಮತ್ತು ದಿನೇಶ್‌ ಗುಂಡೂರಾವ್ ಸುದೀರ್ಘ ಚರ್ಚೆಯ ವೇಳೆ, ಆದಷ್ಟು ಶೀಘ್ರ ಸಂಪುಟ ವಿಸ್ತರಣೆ ಮಾಡಬೇಕು. ಇಲ್ಲದಿದ್ದಲ್ಲಿ ಪಕ್ಷ ಹಾಗೂ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ‌ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಕರೆದು ಚರ್ಚೆ ನಡೆಸಬೇಕಾದ ಬಗ್ಗೆಯೂ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ.

‘ಪಾಟೀಲ’ದ್ವಯರ ಭೇಟಿ: ಅದಕ್ಕೂ ಮೊದಲು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶಾಸಕರಾದ ಎಂ.ಬಿ. ಪಾಟೀಲ ಹಾಗೂ ಬಿ.ಸಿ. ಪಾಟೀಲ ಅವರು ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆದಷ್ಟು ಬೇಗ ಸಂಪುಟ ವಿಸ್ತರಿಸದಿದ್ದರೆ ಪಕ್ಷದೊಳಗೆ ಅತೃಪ್ತಿ ವ್ಯಕ್ತವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಮುಖ್ಯಾಂಶಗಳು

* ಶೀಘ್ರ ಸಂಪುಟ ವಿಸ್ತರಣೆಗೆ ಹಲವರ ಪಟ್ಟು

* ಅಸಮಾಧಾನ ಸ್ಫೋಟಗೊಳ್ಳುವ ಎಚ್ಚರಿಕೆ

* ಈ ತಿಂಗಳ ಒಳಗೇ ವಿಸ್ತರಣೆ– ದಿನೇಶ್‌ ಭರವಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.