ADVERTISEMENT

ಸಂಪುಟಕ್ಕೆ ಐವರ ಸೇರ್ಪಡೆ?

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 19:20 IST
Last Updated 26 ಜೂನ್ 2018, 19:20 IST

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗದ ಕಾರಣಕ್ಕೆ ಬಂಡಾಯದ ಬಾವುಟ ಹಾರಿಸಿದ್ದ ಹಿರಿಯ ಶಾಸಕರ ಮುನಿಸು ತಣಿಸಲು ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌, ನಾಲ್ಕು ಅಥವಾ ಐವರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಿದೆ.

ಎಂ.ಬಿ. ಪಾಟೀಲ, ಬಿ.ಕೆ. ಸಂಗಮೇಶ್ವರ (ಇಬ್ಬರೂ ಲಿಂಗಾಯತ), ಸಿ.ಎಸ್‌. ಶಿವಳ್ಳಿ (ಕುರುಬ), ಈ. ತುಕಾರಾಂ (ಎಸ್‌ಟಿ), ಒಕ್ಕಲಿಗ ಸಮುದಾಯದ ಪ್ರಾತಿನಿಧ್ಯದ ಅಡಿಯಲ್ಲಿ ರಾಮಲಿಂಗಾ ರೆಡ್ಡಿ (ಒಕ್ಕಲಿಗ–ರೆಡ್ಡಿ ) ಅಥವಾ ಎಂ. ಕೃಷ್ಣಪ್ಪ (ಒಕ್ಕಲಿಗ) ಸಂಭಾವ್ಯ ಸಚಿವರ ಪಟ್ಟಿಯಲ್ಲಿದ್ದಾರೆ.

ಮತ್ತೊಬ್ಬ ಹಿರಿಯ ನಾಯಕ ಎಚ್‌.ಕೆ. ಪಾಟೀಲ ಅವರಿಗೆ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್‌ ನಿರ್ಧರಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದೂ ಮೂಲಗಳು ಹೇಳಿವೆ.

ADVERTISEMENT

‘ಬಜೆಟ್‌ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಿಸಲು ಉದ್ದೇಶಿಸಲಾಗಿದೆ. ಬಹುತೇಕ ಇದೇ 30ರಂದು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಭಾನುವಾರ ರಾತ್ರಿ ದೆಹಲಿಗೆ ತೆರಳಿದ್ದ ಎಂ.ಬಿ. ಪಾಟೀಲ ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು, ಸಂಪುಟ ಸ್ಥಾನ ಸಿಗುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಜೊತೆಗೂ ಮಂಗಳವಾರ ಬೆಳಿಗ್ಗೆ ಪಾಟೀಲ ಚರ್ಚೆ ನಡೆಸಿದ್ದಾರೆ.

ಎರಡನೇ ಹಂತದ ಸಂಪುಟ ವಿಸ್ತರಣೆ ಬಳಿಕವೂ ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಇರುವುದರಿಂದ, ಈ ಬೆನ್ನಲ್ಲೆ ಪ್ರಮುಖ ನಿಗಮ – ಮಂಡಳಿಗಳಿಗೆ ಶಾಸಕರನ್ನು ನೇಮಿಸಲು ಕೂಡಾ ಹೈಕಮಾಂಡ್‌ ತೀರ್ಮಾನಿಸಿದೆ. ಶಾಸಕರಾದ ಡಾ. ಸುಧಾಕರ್‌, ಬಿ.ಸಿ. ಪಾಟೀಲ, ರಹೀಂ ಖಾನ್‌, ಅಜಯ್‌ ಸಿಂಗ್‌, ಬಿ. ನಾರಾಯಣರಾವ್‌, ನಾಗೇಂದ್ರ, ಭೀಮಾ ನಾಯ್ಕ್ ಮುಂತಾದವರ ಹೆಸರು ಈ ಪಟ್ಟಿಯಲ್ಲಿದೆ. ಎಸ್‌.ಟಿ. ಸೋಮಶೇಖರ್‌, ಮುನಿರತ್ನ ಮತ್ತು ಬೈರತಿ ಬಸವರಾಜು ಪೈಕಿ ಯಾರಾದರೂ ಇಬ್ಬರು ನಿಗಮ –ಮಂಡಳಿಗೆ ನೇಮಕವಾಗುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

‘ಈ ಮಧ್ಯೆ, 28 ಅಥವಾ 29ರಂದು ಸಂಪುಟ ವಿಸ್ತರಣೆ ಮತ್ತು ನಿಗಮ– ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆಯಾಗಲಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರಿಗೆ ಹೇಳಿದ್ದಾರೆ ಎಂದೂ ಗೊತ್ತಾಗಿದೆ.

ಕೆಪಿಸಿಸಿಗೆ ಮೇಜರ್‌ ಸರ್ಜರಿ?: 2019ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಕೆಪಿಸಿಸಿ ಪುನರ್‌ ರಚಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೀರ್ಮಾನಿಸಿದ್ದಾರೆ. ಪಕ್ಷ ನಿಷ್ಠರಾದವರನ್ನು ಸೇರಿಸಿಕೊಂಡು ಸಂಘಟನಾತ್ಮಕ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಲು ರಾಹುಲ್‌ ಉದ್ದೇಶಿಸಿದ್ದಾರೆ ಎಂದೂ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.