ADVERTISEMENT

ಕೊಡಚಾದ್ರಿಗೆ ಕೇಬಲ್‌ ಕಾರು: ₹375 ಕೋಟಿ ವೆಚ್ಚ

ಮಂಜುನಾಥ್ ಹೆಬ್ಬಾರ್‌
Published 9 ಜನವರಿ 2025, 23:21 IST
Last Updated 9 ಜನವರಿ 2025, 23:21 IST
<div class="paragraphs"><p>ಕೊಡಚಾದ್ರಿ</p></div>

ಕೊಡಚಾದ್ರಿ

   

ಕರ್ನಾಟಕದ ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಕೊಡಚಾದ್ರಿ ಬೆಟ್ಟದಲ್ಲಿ ರೋಪ್‌ವೇ (ಕೇಬಲ್‌ ಕಾರು) ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಿದ್ಧತೆ ನಡೆಸಿದೆ. 3.7 ಕಿ.ಮೀ ಉದ್ದದ ಈ ರೋಪ್‌ವೇಗೆ ಅಂದಾಜು ₹375 ಕೋಟಿ ವೆಚ್ಚವಾಗಲಿದೆ. ಯೋಜನೆ ಅನುಷ್ಠಾನದ ಸಂದರ್ಭದಲ್ಲಿ 28 ಎಕರೆ ಕಾಡು ಹನನವಾಗಲಿದೆ. 

ರಮ್ಯ ಮನೋಹರವಾದ ಕೊಡಚಾದ್ರಿ ಬೆಟ್ಟ ತಲುಪುವುದೇ ಸಾಹಸ. ಕಡಿದಾದ ಹಾಗೂ ದುರ್ಗಮವಾದ ಹಾದಿಯಲ್ಲಿ ಜೀಪು ಹೊರತುಪಡಿಸಿ ಬೇರೆ ಯಾವ ವಾಹನವೂ ಸಾಗದು. ಕಡಿದಾದ ಬೆಟ್ಟದಲ್ಲಿ ಚಾರಣ ನಡೆಸುವ ಸಲುವಾಗಿ ಬರುವ ಪ್ರವಾಸಿಗರ ಸಂಖ್ಯೆ ದೊಡ್ಡದು. ರೋಪ್‌ವೇ ನಿರ್ಮಿಸಿದರೆ ಕೊಲ್ಲೂರಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಸುಗಮ ಸಂಪರ್ಕ ಕಲ್ಪಿಸಬಹುದು ಎಂಬುದು ಹೆದ್ದಾರಿ ಸಚಿವಾಲಯದ ಆಲೋಚನೆ.

ADVERTISEMENT

ಜೀವ ವೈವಿಧ್ಯದ ತಾಣದಲ್ಲಿ ಕೈಗೆತ್ತಿಕೊಳ್ಳುವ ಈ ಯೋಜನೆಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದೆ. 

ಈ ಯೋಜನೆಗೆ ನಾಗಪುರದ ಕೆ ಆ್ಯಂಡ್‌ ಜೆ ಪ್ರಾಜೆಕ್ಟ್‌ ಲಿಮಿಟೆಡ್‌ ಅನ್ನು ಕನ್ಸಲ್ಟೆಂಟ್‌ ಆಗಿ ನೇಮಿಸಲಾಗಿದೆ. ಈ ಸಂಸ್ಥೆಯು ಯೋಜನೆಯ ಪೂರ್ವ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿ ರಾಷ್ಟ್ರೀಯ ಹೆದ್ದಾರಿ ಸರಕು ನಿರ್ವಹಣೆ ಸಂಸ್ಥೆಗೆ (ಎನ್‌ಎಚ್‌ಎಲ್‌ಎಂ) ಸಲ್ಲಿಸಿದೆ. ಅಭಿವೃದ್ಧಿ, ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾದರಿಯಲ್ಲಿ ಕೈಗೆತ್ತಿಕೊಳ್ಳುವ ಯೋಜನೆಯ ವೆಚ್ಚ ₹309 ಕೋಟಿ ಆಗಲಿದೆ. ವಿನ್ಯಾಸ, ಅಳವಡಿಕೆ ಹಾಗೂ ಗುತ್ತಿಗೆದಾರರ ಲಾಭ ₹42 ಕೋಟಿ ಎಂದು ಅಂದಾಜಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆಯು (ಶೇ 18) ₹23.62 ಕೋಟಿ ಆಗಲಿದೆ.28 ಎಕರೆ ಅರಣ್ಯ ಬಳಕೆಗೆ ಅನುಮೋದನೆ ಕೋರಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾ‍ಪಮಾನ ಬದಲಾವಣೆ ಸಚಿವಾಲಯಕ್ಕೆ ಸಂಸ್ಥೆ ಡಿಸೆಂಬರ್ 12ರಂದು ಪ್ರಸ್ತಾವನೆ ಸಲ್ಲಿಸಿದೆ. 

ರೋಪ್‌ವೇಯಲ್ಲಿ ಎರಡು ನಿಲ್ದಾಣಗಳು ಹಾಗೂ ಒಂಬತ್ತು ಟವರ್‌ಗಳು ಇರಲಿವೆ. ಈಗ ‍ಪ್ರವಾಸಿಗರು ಬೆಟ್ಟ ಹತ್ತಲು ಮೂರು ಗಂಟೆ ಬೇಕಾಗುತ್ತದೆ. ರೋಪ್‌ವೇ ನಿರ್ಮಾಣದ ಬಳಿಕ ಈ ಅವಧಿ 30 ನಿಮಿಷಕ್ಕೆ ಇಳಿಯಲಿದೆ. ‍ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಈ ಯೋಜನೆಯು ಪರಿಸರ ಸ್ನೇಹಿ. ಕಾಡುಪ್ರಾಣಿಗಳಿಗೂ ತೊಂದರೆ ಆಗುವುದಿಲ್ಲ. ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ವ್ಯಾಪಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಸರಕು ನಿರ್ವಹಣೆ ಸಂಸ್ಥೆಯು ಯೋಜನೆಯನ್ನು ಸಮರ್ಥಿಸಿಕೊಂಡಿದೆ. 

ಮತ್ತೆ ಬಲಪ್ರಯೋಗ ಬೇಡ:
‘ದೇಶದ ಒಟ್ಟು ಭೂಪ್ರದೇಶದಲ್ಲಿ ವನ್ಯಜೀವಿ ಪ್ರದೇಶ ಇರುವುದು ಶೇ 4ರಷ್ಟು ಮಾತ್ರ. ಇಲ್ಲಿ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಬೇಕೆ ವಿನಃ ಪ್ರವಾಸೋದ್ಯಮಕ್ಕಲ್ಲ. ಪ್ರವಾಸೋದ್ಯಮ ಬೆಳೆಯಬೇಕು ಹಾಗೂ ಉದ್ಯೋಗಾವಕಾಶ ಸಿಗಬೇಕು ಎಂಬುದು ನಿಜ. ಆದರೆ, ಪರಿಸರ ಅಸಮತೋಲನ ಸೃಷ್ಟಿಸುವುದು ಸರಿಯಲ್ಲ. ಈಗಾಗಲೇ ಒತ್ತಡದಲ್ಲಿರುವ ಪಶ್ಚಿಮ ಘಟ್ಟಗಳ ಮೇಲೆ ಪುನಃ ಬಲ ಪ್ರಯೋಗ ಬೇಡ. ಬದಲಿಗೆ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ದೀರ್ಘಾವಧಿ ಕ್ರಮಗಳಿಗೆ ಸರ್ಕಾರಗಳು ಅನುದಾನ ಒದಗಿಸುವುದು ಒಳಿತು‘ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅಭಿಪ್ರಾಯಪಡುತ್ತಾರೆ.

‘ಯೋಜನೆ ಕೈಬಿಡಲಿ’

ಆಧ್ಯಾತ್ಮಿಕ ಜಾಗೃತಿ ಸ್ಥಳವಾದ ಕೊಡಚಾದ್ರಿ ವಿಶ್ವ ಪಾರಂಪಾರಿಕ ತಾಣವೂ ಹೌದು. ಆದಿ ಶಂಕರರಿಗೆ ಪ್ರೇರಣೆ ಕೊಟ್ಟ ಸ್ಥಳ. ರೋಪ್‌ವೇ ಯೋಜನೆಯು ಕೊಡಚಾದ್ರಿಗೆ ಪೂರಕವಲ್ಲ. ಪರಿಸರಕ್ಕೆ ಹಾನಿ ಉಂಟು ಮಾಡುವ ಈ ಯೋಜನೆಯನ್ನು ಕೈಬಿಡಬೇಕು. ಸ್ಥಳೀಯರು ಹಾಗೂ ಪರಿಸರ ಹೋರಾಟಗಾರರ ಸಹಕಾರದಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧ. 

–ಈಶವಿಠಲದಾಸ ಸ್ವಾಮೀಜಿ ಕೇಮಾರು, ಗೌರವಾಧ್ಯಕ್ಷ, ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌

ರೋಪ್‌ವೇ ಯೋಜನೆಯು ಕೊಡಚಾದ್ರಿಗೆ ಪೂರಕವಲ್ಲ. ಪರಿಸರಕ್ಕೆ ಹಾನಿ ಉಂಟು ಮಾಡುವ ಈ ಯೋಜನೆಯನ್ನು ಕೈಬಿಡಬೇಕು
ಈಶವಿಠಲದಾಸ ಸ್ವಾಮೀಜಿ ಕೇಮಾರು ಗೌರವಾಧ್ಯಕ್ಷ, ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌

ರಸ್ತೆ ಅಭಿವೃದ್ಧಿಗೆ ಅನುಮತಿ ನಿರಾಕರಿಸಿದ್ದ ವನ್ಯಜೀವಿ ಮಂಡಳಿ

ಕೊಡಚಾದ್ರಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಕಡಿದಾದ ರಸ್ತೆ ಅಭಿವೃದ್ಧಿ ಮಾಡುವ ಪ್ರಸ್ತಾವನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಅನುಮತಿ ನಿರಾಕರಿಸಿತ್ತು. 

ಮೂಕಾಂಬಿಕಾ ವನ್ಯಜೀವಿಧಾಮದೊಳಗೆ ರಸ್ತೆ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರವು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2022ರ ಮೇ ತಿಂಗಳಲ್ಲಿ ಸಭೆ ಸೇರಿದ್ದ ಸ್ಥಾಯಿ ಸಮಿತಿಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈಗಿರುವ ಮಣ್ಣಿನ ರಸ್ತೆಯಲ್ಲಿ ಗುಂಡಿ ಬಿದ್ದಾಗ ಮುಚ್ಚುವ ಕೆಲಸವನ್ನು ಮಾಡಬೇಕು ಎಂದು ಹೇಳಿತ್ತು. ಬೆಟ್ಟಕ್ಕೆ ಸಂಪರ್ಕ ಕಲ್ಪಿಸಲು ರೋಪ್‌ವೇ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ಅಧ್ಯಯನ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ಸ್ಥಾಯಿ ಸಮಿತಿ ಸಲಹೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.