ADVERTISEMENT

ಹೊಸ ದರ ವ್ಯವಸ್ಥೆಗೆ ವರ್ಗಾವಣೆ ಆಗದಿದ್ದರೆ ಜ.1ರಿಂದ ಟಿ.ವಿಯಲ್ಲಿ ಏನೂ ಬರುವುದಿಲ್ಲ

ಗ್ರಾಹಕರ ಆಯ್ಕೆಯ ಚಾನೆಲ್‌ಗಳನ್ನೇ ನೀಡಬೇಕು l ಟ್ರಾಯ್‌ ನಿರ್ಧಾರಕ್ಕೆ ಆಪರೇಟರ್‌ಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 3:44 IST
Last Updated 19 ಡಿಸೆಂಬರ್ 2018, 3:44 IST
   

ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ನಿಮ್ಮ ಟಿವಿ ಸೆಟ್‌ಗಳಲ್ಲಿ ಬಹುತೇಕ ಚಾನೆಲ್‌ಗಳು ಮಾಯವಾಗಬಹುದು. ಜನವರಿ 1 ರಿಂದ ಕೇಬಲ್‌ ಮತ್ತು ಡಿಟಿಎಚ್‌ಗಳಿಗೆ ಹೊಸ ದರ ವ್ಯವಸ್ಥೆ ಜಾರಿ ಆಗಲಿದೆ. ಗ್ರಾಹಕರು ಹೊಸ ದರ ವ್ಯವಸ್ಥೆಗೆ ವರ್ಗಾವಣೆ ಆಗದಿದ್ದರೆ ಟಿ.ವಿಯಲ್ಲಿ ಏನೂ ಬರುವುದಿಲ್ಲ!

ಹೊಸ ವ್ಯವಸ್ಥೆಯ ಅನ್ವಯ ಕೇಬಲ್‌ ಮತ್ತು ಡಿಟಿಎಚ್‌ ಆಪರೇಟರ್‌ಗಳು ಗ್ರಾಹಕರ ಆಯ್ಕೆಯ ಚಾನೆಲ್‌ಗಳನ್ನು ಮಾತ್ರ ನೀಡಬೇಕು. ಚಾನೆಲ್‌ಗಳ ಆಯ್ಕೆಗೆ ತಕ್ಕಂತೆ ದರವನ್ನು ಪಾವತಿಸಬೇಕಾಗುತ್ತದೆ.ಇದರಿಂದ ಆಪರೇಟರ್‌ಗಳು ಬೇಕಾಬಿಟ್ಟಿ ಚಾನೆಲ್‌ಗಳನ್ನು ಗ್ರಾಹಕರ ಮೇಲೆ ಹೇರುವುದನ್ನು ತಪ್ಪಿಸಿದಂತಾಗುತ್ತದೆ.

ಹೊಸ ವ್ಯವಸ್ಥೆಯ ಜಾರಿಗೆ ಆಪರೇಟರ್‌ಗಳು ಅಗತ್ಯ ಸಾಫ್ಟ್‌ವೇರ್‌ ಮತ್ತು ವೆಬ್‌ ಪೋರ್ಟಲ್‌ ವ್ಯವಸ್ಥೆಯನ್ನು ಇನ್ನೂ ಮಾಡಿಕೊಂಡಿಲ್ಲ. ಇದರಿಂದ ಸಮಸ್ಯೆ ಆಗುತ್ತದೆ. ಜನವರಿ 1ರ ನಂತರ ದೂರದರ್ಶನದ 26 ಚಾನೆಲ್‌ಗಳು ಮಾತ್ರ ಸಿಗುತ್ತವೆ. ಖಾಸಗಿ ಚಾನೆಲ್‌ಗಳು ಬಿತ್ತರ ಆಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆದರೆ, ಗ್ರಾಹಕ ತಿಂಗಳಿಗೆ ನೀಡಬೇಕಾದ ಶುಲ್ಕವೂ ಆತನ ಆಯ್ಕೆಯನ್ನು ಅವಲಂಬಿಸಿ ಕೇಬಲ್‌ ಮತ್ತು ಡಿಟಿಎಚ್‌ ದರದಲ್ಲಿ ವ್ಯತ್ಯಯವಾಗುತ್ತದೆ. ಆಪರೇಟರ್‌ಗಳ ಪ್ರಕಾರ, 400 ಚಾನೆಲ್‌ಗಳಿಗೆ ₹500 ರಿಂದ ₹1500 ರವರೆಗೂ ದರ ಏರಿಕೆ ಆಗಬಹುದು.

ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ನೀಡಿದ ನಿರ್ದೇಶನದ ಮೇರೆಗೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಹೊಸ ದರ ವ್ಯವಸ್ಥೆಯನ್ನು ಪ್ರಕಟಿಸಿದೆ.

ಕೇಬಲ್ ಮತ್ತು ಡಿಟಿಎಚ್‌ ಬ್ರಾಡ್‌ಕಾಸ್ಟ್‌ ಕಂಪನಿಗಳು ಈ ಕ್ರಮವನ್ನು ವಿರೋಧಿಸಿವೆ. ‘ಟ್ರಾಯ್‌ ಏಕಾಏಕಿ ಹೊಸ ವ್ಯವಸ್ಥೆ ಜಾರಿ ಮಾಡಿರುವುದರಿಂದ ಗ್ರಾಹಕರ ಮೇಲೆ ಹೊರೆ ಹೆಚ್ಚುತ್ತದೆ. ಹೊಸ ದರ ವ್ಯವಸ್ಥೆ ಜಾರಿಗೊಳಿಸುವುದು ತಕ್ಷಣಕ್ಕೆ ಕಷ್ಟವಾಗುತ್ತದೆ’ ಎಂದು ಕೇಬಲ್‌ ಆಪರೇಟರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಬ್ರಾಡ್‌ಕಾಸ್ಟ್‌ ಕಂಪನಿಗಳ ಆಕ್ಷೇಪದಲ್ಲಿ ಹುರುಳಿಲ್ಲ. ಆರು ತಿಂಗಳ ಹಿಂದೆಯೇ ಕಂಪನಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದೇವೆ. ಅಲ್ಲದೆ ಸ್ಥಳೀಯ ಕೇಬಲ್‌ ಆಪರೇಟರ್‌ಗಳು ಮತ್ತು ಮಲ್ಟಿ ಸಿಸ್ಟಮ್‌ ಆಪರೇಟರ್‌ಗಳಿಗೆ ತರಬೇತಿಯನ್ನೂ ನೀಡಲಾಗಿದೆ. ಗ್ರಾಹಕರ ಹಿತಾಸಕ್ತಿಯ ಕಾರಣ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ದಿನಾಂಕವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದು ಟ್ರಾಯ್‌ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಈಗ ₹300 ರಿಂದ ₹350 ಕ್ಕೆ 400 ಚಾನೆಲ್‌ ಕೊಡುತ್ತೇವೆ ಎಂದು ಬ್ರಾಡ್‌ ಕಾಸ್ಟರ್‌ಗಳು ಹೇಳುತ್ತಾರೆ.

ಆದರೆ, ಅವುಗಳಲ್ಲಿ ಅನಗತ್ಯ ಮತ್ತು ಕೆಲಸಕ್ಕೆ ಬಾರದ ಚಾನೆಲ್‌ಗಳೇ ತುಂಬಿ ಹೋಗಿವೆ. ಈ ಬಗ್ಗೆ ಗ್ರಾಹಕರೂ ರೋಸಿ ಹೋಗಿ ದೂರು ನೀಡುತ್ತಿದ್ದಾರೆ. ಇಂತಹ ಚಾನೆಲ್‌ಗಳ ಜಾಗವನ್ನು ತೆರವು ಮಾಡಿ ಹೊಸ ಮತ್ತು ಆಸಕ್ತಿದಾಯಕ ಚಾನೆಲ್‌ಗಳಿಗೆ ಅವಕಾಶ ನೀಡಲು ಹೊಸ ವ್ಯವಸ್ಥೆಯಿಂದ ಸಾಧ್ಯ ಎಂದು ಅವರು ವಿವರಿಸಿದರು.

ಹೊಸ ದರ ವ್ಯವಸ್ಥೆ:ಹೊಸ ದರ ವ್ಯವಸ್ಥೆ ಜಾರಿಗೆ ಬಂದ ಬಳಿಕ ಗ್ರಾಹಕರು 100 ಚಾನೆಲ್‌ಗಳನ್ನು ಆಯ್ಕೆ ಮಾಡಿ
ಕೊಳ್ಳಬಹುದು. ಇದರಲ್ಲಿ ದೂರದರ್ಶನದ 26 ಚಾನೆಲ್‌ಗಳು ಕಡ್ಡಾಯವಾಗಿರುತ್ತದೆ. ತಿಂಗಳಿಗೆ ₹130 ಮತ್ತು ಶೇ 18 ಜಿಎಸ್‌ಟಿ ಒಳಗೊಂಡಿರುತ್ತದೆ. ಅಲ್ಲದೆ, ಗ್ರಾಹಕರಿಗೆ ಹೆಚ್ಚುವರಿಯಾಗಿ 25 ಉಚಿತವಾಗಿ ಪ್ರಸಾರ ಮಾಡುವ (ಫ್ರೀ ಟು ಏರ್‌) ಚಾನೆಲ್‌ಗಳನ್ನು ನೀಡಲಾಗುತ್ತದೆ. ಇದಕ್ಕೆ ₹20 ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಈ ರೀತಿ ಒಟ್ಟು 125 ಚಾನೆಲ್‌ಗಳು ಗ್ರಾಹಕರಿಗೆ ಸಿಗುತ್ತವೆ.

ಈ 125 ಚಾನೆಲ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಾನೆಲ್ ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಬ್ರಾಡ್‌ಕಾಸ್ಟರ್‌ಗಳು ನಿಗದಿ ಮಾಡಿದಷ್ಟು ದರವನ್ನು ನೀಡಬೇಕು. ಇದಕ್ಕೆ ಗ್ರಾಹಕರು ಕೇಬಲ್ ಆಪರೇಟರ್‌ಗಳನ್ನು ಸಂಪರ್ಕಿಸಿ ತಮ್ಮ ಆಯ್ಕೆಯ ಚಾನೆಲ್‌ಗಳನ್ನು ಹಾಕಿಸಿಕೊಳ್ಳಬಹುದು.

ಬ್ರಾಡ್‌ ಕಾಸ್ಟರ್‌ಗಳು ಈಗಾಗಲೇ ತಮ್ಮ ಚಾನೆಲ್‌ಗಳ ದರವನ್ನು ಸ್ಕ್ರೀನ್ ಮೇಲೆ ಬಿತ್ತರಿಸಲಾರಂಭಿಸಿವೆ. ಏಕ (ಇಂಡಿವಿಜ್ಯುವಲ್‌) ಚಾನೆಲ್‌ಗಳು ತಿಂಗಳಿಗೆ ₹ 1 ರಿಂದ ₹ 19 ರೊಳಗೆ ದರ ನಿಗದಿ ಮಾಡಿವೆ. ಚಾನೆಲ್‌ಗಳ ಸಮೂಹವನ್ನು ಹೊಂದಿರುವ ಸ್ಟಾರ್‌ ಟಿವಿ ನೆಟ್‌ವರ್ಕ್‌ ಸ್ಟಾರ್‌ ಪ್ಲಸ್‌ಗೆ ₹19 ಮತ್ತು ಸ್ಟಾರ್‌ ಮೂವೀಸ್‌ಗೆ ₹ 15 ನಿಗದಿ ಮಾಡಿದೆ.

ಕನ್ನಡದಲ್ಲಿ ಚಾನೆಲ್‌ಗಳ ಸಮೂಹಕ್ಕೆ ನಾಲ್ಕು ಹಂತಗಳ ದರ ನಿಗದಿ ಮಾಡಲಾಗಿದೆ. ₹30 (ಬೇಸ್‌), ₹69 (ಪ್ರೀಮಿಯಂ), ₹75 (ಎಚ್‌ಡಿ ಬೇಸ್‌) ಮತ್ತು ₹110 (ಎಚ್‌ಡಿ– ಪ್ರೀಮಿಯಂ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.