ADVERTISEMENT

ಕೋವಿಡ್‌ ಪರೀಕ್ಷೆ ಹೆಸರಿನಲ್ಲಿ ₹258 ಕೋಟಿ ಅಕ್ರಮ: ಸಿಎಜಿ ವರದಿ

ಆರ್ಥಿಕ ಇಲಾಖೆ ಸೂಚನೆ ಕಡೆಗಣಿಸಿದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 16:35 IST
Last Updated 20 ಆಗಸ್ಟ್ 2025, 16:35 IST
ಕೋವಿಡ್‌ 19– ಪ್ರಾತಿನಿಧಿಕ ಚಿತ್ರ
ಕೋವಿಡ್‌ 19– ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ಅವಧಿಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ತಪಾಸಣೆ ಹೆಸರಿನಲ್ಲಿ ₹258.80 ಕೋಟಿಯನ್ನು ಅಕ್ರಮವಾಗಿ ವೆಚ್ಚ ಮಾಡಿದೆ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ವಿಧಾನ ಸಭೆಯಲ್ಲಿ ಬುಧವಾರ ಮಂಡಿಸಲಾದ ‘ಕಟ್ಟಡ ಮತ್ತು ಇತರ ಕಲ್ಯಾಣ ಕಾರ್ಮಿಕರ ಕಲ್ಯಾಣ ವರದಿ’ಯಲ್ಲಿ ಈ ಮಾಹಿತಿ ಇದೆ. 2020ರಿಂದ 2022ರ ಮಧ್ಯೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಅಕ್ರಮ ನಡೆದಿದೆ. 

ಕೋವಿಡ್‌ನ ಮೊದಲ ಅಲೆಯ ಸಂದರ್ಭದಲ್ಲಿ (2020ರ ಜುಲೈ) ಮಂಡಳಿಯು ತನ್ನ ಸದಸ್ಯ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲು ಸುಮಾರು ₹258.80 ಕೋಟಿ ಮೊತ್ತದ ಯೋಜನೆ ರೂಪಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವದಲ್ಲಿ ಹಲವು ನ್ಯೂನತೆಗಳಿವೆ ಎಂದು ಇಲಾಖೆಯು ಪ್ರಸ್ತಾವವನ್ನು ತಿರಸ್ಕರಿಸಿತ್ತು ಎಂಬ ಮಾಹಿತಿ ವರದಿಯಲ್ಲಿದೆ. 

ADVERTISEMENT

2020ರ ಡಿಸೆಂಬರ್‌ನಲ್ಲಿ ಮಂಡಳಿಯು ಮತ್ತೆ ಸಲ್ಲಿಸಿದ್ದ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಎರಡನೇ ಬಾರಿ ತಿರಸ್ಕರಿಸಿತ್ತು. ಜತೆಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ (ಕೆಟಿಪಿಪಿ) 4(ಜಿ) ಸೆಕ್ಷನ್‌ ಅಡಿಯಲ್ಲಿ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿತ್ತು. ₹10 ಕೋಟಿ ಮೊತ್ತ ಮೀರುವ ಪ್ರಸ್ತಾವಗಳಿಗೆ ಸಂಪುಟ ಸಭೆಯ ಒಪ್ಪಿಗೆ ಅಗತ್ಯ ಎಂದೂ ಹೇಳಿತ್ತು ಎಂದು ಸಿಎಜಿ ವಿವರಿಸಿದೆ.

ಸಂಪುಟ ಸಭೆಯ ಒಪ್ಪಿಗೆ ಪಡೆಯುವುದನ್ನು ತಪ್ಪಿಸುವ ಸಲುವಾಗಿ ಮಂಡಳಿಯು ₹258.80 ಕೋಟಿಯ ಯೋಜನೆಯನ್ನು, ತಲಾ ₹8.62 ಕೋಟಿ ಮೊತ್ತದ 30 ಯೋಜನೆಗಳಾಗಿ ವಿಂಗಡಿಸಿತು. ಕೆಟಿಪಿಪಿ ಕಾಯ್ದೆಯ 4(ಜಿ) ಸೆಕ್ಷನ್‌ ಅನ್ನು ಉಲ್ಲಂಘಿಸಿ, ಏಜಿನ್ಸಿಗಳಿಂದ ಕೊಟೇಷನ್‌ ಆಹ್ವಾನಿಸಿತು. ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ50ರಷ್ಟನ್ನು ನಿಯಮಬಾಹಿರವಾಗಿ ಮುಂಗಡ ನೀಡಿತು. ಏಜೆನ್ಸಿಗಳು ಸಲ್ಲಿಸಿದ ಬಿಲ್‌ಗಳನ್ನು ಪರಿಶೀಲಿಸದೆಯೇ ಹಣವನ್ನು ಬಿಡುಗಡೆ ಮಾಡಿತು ಎಂದು ಆರೋಪಿಸಿದೆ.

ನೋಂದಾಯಿತ ಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆ ನಡೆಸುವ ಈ ಯೋಜನೆಯಲ್ಲಿ ಸಾಲು–ಸಾಲು ಅಕ್ರಮಗಳು ನಡೆದಿದ್ದು, ಸರ್ಕಾರವು ಅಗತ್ಯ ಪರಿಶೀಲನೆ ನಡೆಸಬೇಕು. ಅಕ್ರಮದ ಮೊತ್ತ ವಸೂಲಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.