ಸುವರ್ಣ ವಿಧಾನಸೌಧ (ಬೆಳಗಾವಿ): 2017–18ರಿಂದ 2021–22ರ ಅವಧಿಯಲ್ಲಿ ರಾಜ್ಯ ಹಣಕಾಸು ಆಯೋಗದ ಶಿಫಾರಸಿನಂತೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ₹ 43,782.04 ಕೋಟಿಯಷ್ಟು ಕಡಿಮೆ ಅನುದಾನ ಬಿಡುಗಡೆಯಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
ವಿಧಾನಸಭೆಯಲ್ಲಿ ಗುರುವಾರ ವರದಿಯನ್ನು ಮಂಡಿಸಿದ್ದು, ‘ರಾಜ್ಯ ಹಣಕಾಸು ಆಯೋಗವು ಮೇಲಿನ ಅವಧಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ₹ 2,26,232.95 ಕೋಟಿ ಅನುದಾನ ಬಿಡುಗಡೆಗೆ ಶಿಫಾರಸು ಮಾಡಿತ್ತು. ಆದರೆ, ₹ 1,82,450.91 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅವಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನಿರ್ಬಂಧಿತ ಅನುದಾನದ ಬಿಡುಗಡೆಯಲ್ಲೂ ಕೊರತೆಯಾಗಿತ್ತು. ₹ 5,826.50 ಕೋಟಿಗಳಿಗೆ ಮಂಜೂರಾತಿ ಇದ್ದರೂ, ₹ 4,235.38 ಕೋಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಅನಿರ್ಬಂಧಿತ ಅನುದಾನದ ಬಿಡುಗಡೆಯಲ್ಲಿ ಶೇಕಡ 10ರಿಂದ ಶೇ 50ರವರೆಗೂ ಏರುಪೇರು ಕಂಡುಬಂದಿದೆ ಎಂದು ಸಿಎಜಿ ಹೇಳಿದೆ.
ಚುನಾವಣೆ ವಿಳಂಬಕ್ಕೆ ಆಕ್ಷೇಪ: ಕ್ಷೇತ್ರಗಳ ಪುನರ್ವಿಂಗಡಣೆ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ರಾಜ್ಯ ಸರ್ಕಾರವು 2021ರ ಅಕ್ಟೋಬರ್‌ನಲ್ಲಿ ಹಿಂಪಡೆದುಕೊಂಡ ಕಾರಣದಿಂದ ರಾಜ್ಯದ 233 ತಾಲ್ಲೂಕು ಪಂಚಾಯಿತಿಗಳು ಮತ್ತು 31 ಜಿಲ್ಲಾ ಪಂಚಾಯಿತಿಗಳಿಗೆ ಎರಡು ವರ್ಷಗಳಿಂದ ಚುನಾವಣಾ ಪ್ರಕ್ರಿಯೆ ನಡೆದಿಲ್ಲ ಎಂದು ಸಿಎಜಿ ಆಕ್ಷೇಪ ವ್ಯಕ್ತಪಡಿಸಿದೆ.
ಎಲ್ಲ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಆಯೋಗವು ಪೂರ್ಣಗೊಳಿಸಿತ್ತು. ಆ ಬಳಿಕ ಆಯೋಗದ ಅಧಿಕಾರವನ್ನು ಹಿಂಪಡೆಯಲಾಯಿತು. 12 ವಾರಗಳಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಪೂರ್ಣಗೊಳಿಸುವಂತೆ ಹೈಕೋರ್ಟ್ 2022ರ ಆಗಸ್ಟ್‌ನಲ್ಲಿ ನಿರ್ದೇಶನ ನೀಡಿತ್ತು. ಈವರೆಗೆ ಅದು ಪೂರ್ಣಗೊಂಡಿಲ್ಲ ಎಂದು ಸಿಎಜಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.