ADVERTISEMENT

‘ಸೂಪರ್ ಸಿ.ಎಂ’ ವಿರುದ್ಧ ಕಿಡಿ: ಬಿಜೆಪಿ ವರಿಷ್ಠರಿಗೆ ದೂರು ನೀಡಲು ಶಾಸಕರ ತಯಾರಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 20:30 IST
Last Updated 14 ಮಾರ್ಚ್ 2020, 20:30 IST
ವಿಜಯೇಂದ್ರ
ವಿಜಯೇಂದ್ರ   

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರು ‘ಸೂಪರ್‌ ಸಿ.ಎಂ’ ರೀತಿ ವರ್ತಿಸುತ್ತಿದ್ದು, ಸರ್ಕಾರದಲ್ಲಿ ಬಿಎಸ್‌ವೈ ಕುಟುಂಬದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು’ ಎಂಬ ಕೂಗು ಬಿಜೆಪಿಯಲ್ಲಿ ಪ್ರಬಲವಾಗುತ್ತಿದೆ.

‘ವಿಜಯೇಂದ್ರ ಮತ್ತು ಅವರ ಬೆನ್ನಿಗೆ ನಿಂತಿರುವ ಗುಂಪು ಸರ್ಕಾರದ ಎಲ್ಲ ಸ್ತರಗಳಲ್ಲೂ ಕೈಯಾಡಿಸುತ್ತಿದೆ. ಇದಕ್ಕೆ ನಿರ್ಬಂಧ ಹಾಕಬೇಕು’ ಎಂದು ಹಕ್ಕೊತ್ತಾಯ ಮಂಡಿಸಿರುವ ಎರಡು ಪತ್ರಗಳನ್ನು ಶಾಸಕರ ಗುಂಪು ಹರಿಯಬಿಟ್ಟಿದೆ.

ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಶನಿವಾರ ಭೇಟಿ ಮಾಡಿ, ದೂರು ಸಲ್ಲಿಸಲು ಶಾಸಕರ ಗುಂಪು ಶತಪ್ರಯತ್ನ ನಡೆಸಿತು. ಉಮೇಶ ಕತ್ತಿ, ಬಸನಗೌಡ ಪಾಟೀಲ ಯತ್ನಾಳ್‌, ಮುರುಗೇಶ ನಿರಾಣಿ ನೇತೃತ್ವದ ತಂಡ ನಡ್ಡಾ ಭೇಟಿಗೆ ಸಮಯವನ್ನೂ ಕೇಳಿತ್ತು. ‘ಇಂದು ಸಾಧ್ಯವಾಗದು; ಮಂಗಳವಾರ(ಮಾ.17ಕ್ಕೆ) ದೆಹಲಿಗೆ ಬನ್ನಿ’ ಎಂದು ನಡ್ಡಾ ಸೂಚಿಸಿದ್ದಾರೆ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ADVERTISEMENT

‘ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ಸಿಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಅನುದಾನ ಕೋರಿ ಮುಖ್ಯಮಂತ್ರಿ ಭೇಟಿ ಮಾಡಿದರೆ, ವಿಜಯೇಂದ್ರನ ಕಡೆ ಬೊಟ್ಟು ಮಾಡುತ್ತಾರೆ. ಇನ್ನು ಎಷ್ಟು ದಿನ ಇದನ್ನು ಸಹಿಸಿಕೊಂಡು ಕೂರುವುದು’ ಎಂದು ಶಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗಾಗಿ ವಿಜಯೇಂದ್ರ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.