ADVERTISEMENT

ಪ್ರಚಾರದ ವಿಡಿಯೊ: ಸರ್ಕಾರದ ಕ್ರಮ ವಜಾ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 22:07 IST
Last Updated 27 ಜನವರಿ 2023, 22:07 IST
   

ಬೆಂಗಳೂರು: ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು 2022ರ ನವೆಂಬರ್‌ನಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದ (ಜಿಐಎಂ-2022) ಪ್ರಚಾರ ವಿಡಿಯೊದ ಕಾರ್ಯಾದೇಶವನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮುಂಬೈನ ಬಿಬಿಪಿ ಸ್ಟುಡಿಯೊ ವರ್ಚ್ಯುವಲ್ ಭಾರತ್ ಪ್ರೈವೇಟ್ ಲಿಮಿಟೆಡ್‌ ಕಂಪನಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

’ಕಂಪನಿಗೆ ನೀಡಿದ್ದ ಕಾರ್ಯಾದೇಶವನ್ನು ಚಿತ್ರದ ಅರ್ಹತೆ ಅಥವಾ ಗುಣಮಟ್ಟ ಆಧರಿಸಿ ರದ್ದುಪಡಿಸಿಲ್ಲ. ಏಕಪಕ್ಷೀಯವಾಗಿ ನಿರ್ಧರಿಸಿದ್ದು, ಇದರಲ್ಲಿ ರಾಜಕೀಯ ಹಸ್ತಕ್ಷೇಪ ಕಂಡುಬರುತ್ತಿದೆ. ಇದರಿಂದ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗು
ತ್ತದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ADVERTISEMENT

‘ಒಪ್ಪಂದದ ಅನುಸಾರ ಬಿಬಿಪಿ ಸ್ಟುಡಿಯೊಗೆ ₹ 1.5 ಕೋಟಿ ಮುಂಗಡ ಪಾವತಿಸಿರುವ ಸರ್ಕಾರ ಬಾಕಿ ಮೊತ್ತವನ್ನೂ ಪಾವತಿಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ.

ಕಳೆದ ವರ್ಷ ಆಗಸ್ಟ್ 11ರಂದು ಕಂಪನಿಗೆ ಕಾರ್ಯಾದೇಶ (ವರ್ಕ್ ಆರ್ಡರ್) ನೀಡಿದ್ದು, 2022ರ ಅಕ್ಟೋಬರ್ 25 ರಂದು, ‘ರದ್ದುಗೊಳಿಸಲಾಗಿದೆ’ ಎಂದು ಕಂಪನಿಗೆ ಇಮೇಲ್ ರವಾನಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.