ADVERTISEMENT

ಕ್ಯಾನ್ಸರ್‌ ಔಷಧ ದರ ನಿಯಂತ್ರಣ: ಹೈಕೋರ್ಟ್‌ ಅಸ್ತು

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 19:11 IST
Last Updated 26 ಜೂನ್ 2019, 19:11 IST
   

ಬೆಂಗಳೂರು: ‘ಕ್ಯಾನ್ಸರ್‌ಗೆ ಚಿಕಿತ್ಸೆಗೆ ನೀಡುವ ಕೆಲವು ಔಷಧಗಳ ದರ ನಿಯಂತ್ರಣಕ್ಕೆ ಸಂಬಂಧಿಸಿದ ಕೇಂದ್ರದ ಆದೇಶ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿದೆ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ‘ಈ ಆದೇಶಕ್ಕೆ ತಡೆ ನೀಡಬೇಕು’ ಎಂಬ ಅರ್ಜಿದಾರರ ಮನವಿಯನ್ನು ಮತ್ತೊಮ್ಮೆ ತಳ್ಳಿ ಹಾಕಿದೆ.

ಈ ಕುರಿತಂತೆ ‘ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ ಪ್ರೈಸಸ್ ಲಿಮಿಟೆಡ್ ಕಂಪನಿ’ ಪ್ರತಿನಿಧಿ ಐ.ರಾಜಶ್ರೀ ಸಲ್ಲಿಸಿದ್ದ ರಿಟ್‌ ಅರ್ಜಿಯ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

‘ಔಷಧ ತಯಾರಕ ಕಂಪನಿಗಳಿಗೆ ಶೇ 30ರಷ್ಟು ಲಾಭದ ಮಿತಿ ವಿಧಿಸಿರುವುದು ಸೂಕ್ತವಾಗಿಯೇ ಇದೆ. ಮಾರಾಟಗಾರರು ಮನಬಂದಂತೆ ದರ ಹೆಚ್ಚಿಸುವುದನ್ನು ನಿಯಂತ್ರಿಸಲು ಮತ್ತು ರೋಗಿಗಳ ಶೋಷಣೆ ತಪ್ಪಿಸುವುದಕ್ಕಾಗಿಯೇ ಈ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಯಾವುದೇ ಆಕ್ಷೇಪಣೆ ಕಂಡುಬರುತ್ತಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಮನವಿ ಏನಿತ್ತು?: ‘ದರ ಇಳಿಕೆಗೆ ಸ್ಪಷ್ಟ ಕಾರಣ ನೀಡಿಲ್ಲ. ಔಷಧ ಬೆಲೆ ನಿಯಂತ್ರಣ ಆದೇಶ 2013ರ ಅನ್ವಯ ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಬೆಲೆ ನಿಗದಿ ಪ್ರಾಧಿಕಾರಕ್ಕೆ ಔಷಧಗಳ ಬೆಲೆ ನಿಗದಿ ಮಾಡುವ ಅಧಿಕಾರವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ 2019ರ ಫೆಬ್ರುವರಿ 27ರಂದು ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದರು.

‘ರೋಗಿಗಳ ಮೇಲೆ ದೌರ್ಜನ್ಯ’

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲೆ ಎಂ.ಸಿ.ನಾಗಶ್ರೀ ಅವರು, ‘ಕ್ಯಾನ್ಸರ್‌ ಔಷಧಗಳನ್ನು ಅತ್ಯಂತ ದುಬಾರಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ರೋಗಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವಾಗಿದೆ’ ಎಂದು ಪುನರುಚ್ಚರಿಸಿದ್ದರು.

‘ಈಗಾಗಾಲೇ ಬಾಂಬೆ ಹೈಕೋರ್ಟ್ ಈ ಕುರಿತಂತೆ ವಿಸ್ತೃತ ಆದೇಶ ಹೊರಡಿಸಿದ್ದು ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.