ADVERTISEMENT

ಜಠರ ಜಗದ ದರ್ಶನಕ್ಕೆ ಕ್ಯಾಪ್ಸೂಲ್‌ ಕ್ಯಾಮ್

ರಾಜ್ಯದಲ್ಲಿ ಪ್ರಥಮ ಬಾರಿಗೆ ಹೈಟೆಕ್‌ ತಂತ್ರಜ್ಞಾನ ಬಳಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 20:15 IST
Last Updated 5 ಫೆಬ್ರುವರಿ 2019, 20:15 IST
ಕ್ಯಾಪ್ಸೂಲ್‌ ಕ್ಯಾಮ್‌
ಕ್ಯಾಪ್ಸೂಲ್‌ ಕ್ಯಾಮ್‌   

ಬೆಂಗಳೂರು: ರಾಕೆಟ್‌ನ ಮುಕುಟದಲ್ಲಿ ಕ್ಯಾಮೆರಾ ಇಟ್ಟು ಬಾಹ್ಯಾಕಾಶದ ನಿಗೂಢತೆಯ ಚಿತ್ರಗಳ ಸೆರೆ ಹಿಡಿಯಲಾಗುತ್ತದೆ. ಸಮುದ್ರದ ಆಳಕ್ಕೆ ಕ್ಯಾಮೆರಾ ಒಯ್ದು ಅದರ ಒಡಲ ವಿಶ್ವವನ್ನು ತೆರೆದಿಡಲಾಗುತ್ತದೆ. ಡ್ರೋನ್‌ ಮೂಲಕ ಕಾಮ್ಯೆರಾ ಕಸರತ್ತು ಈಗ ಮಾಮೂಲಿ ವಿಚಾರ ಬಿಡಿ!

ಇದೀಗ ಮಾನವ ದೇಹದೊಳಗೆ ಪ್ರವೇಶಿಸಿ, ಒಳಗಿನ ಚಿತ್ರಣವನ್ನು ನೀಡುವ ಸೂಕ್ಷ್ಮ ಕ್ಯಾಮೆರಾ ಹೊಂದಿರುವ ಕ್ಯಾಪ್ಸೂಲ್‌ ಬಂದಿವೆ. ಇದು ವೈದ್ಯ ಜಗತ್ತಿನ ತಂತ್ರಜ್ಞಾನ ವಿಸ್ಮಯಗಳಲ್ಲಿ ಒಂದು. ಅಂದ ಹಾಗೆ, ಚಳಿ– ಜ್ವರ ಬಂದಾಗವೈದ್ಯರು ನೀಡುವ ಕ್ಯಾಪ್ಸೂಲ್‌ನಷ್ಟೇ ಗಾತ್ರ ಮತ್ತು ವಿನ್ಯಾಸ ಹೊಂದಿರುತ್ತವೆ.

ಪಾರದರ್ಶಕ ಪುಟಾಣಿ ಕ್ಯಾಪ್ಸೂಲ್‌ನಲ್ಲಿ ಅತಿ ಸೂಕ್ಷ್ಮ ಕ್ಯಾಮೆರಾ ಇಟ್ಟು ಮಾನವ ಜಠರದೊಳಗೆ ದೋಣಿಯಂತೆ ತೇಲಿ ಬಿಡಲಾಗುತ್ತದೆ. ಹೀಗೆ ಜಠರದೊಳಗೆ ಇಳಿಯುವ ಕ್ಯಾಪ್ಸೂಲ್‌ ‘ಜಠರ ಜಗತ್ತಿನ’ ದೃಶ್ಯಗಳನ್ನು ಸೆರೆ ಹಿಡಿಯುತ್ತಲೇ, ಅದನ್ನು ಕಂಪ್ಯೂಟರ್‌ ಪರದೆಗೆ ರವಾನಿಸುತ್ತದೆ. ಇದು ಜಠರದೊಳಗಿನ ವಿದ್ಯಮಾನದ ‘ಲೈವ್‌’ ಚಿತ್ರಣ ನೀಡುತ್ತದೆ. ಇದಕ್ಕೆ ವೈದ್ಯ ಲೋಕದಲ್ಲಿ ‘ಕ್ಯಾಪ್ಸೂಲ್‌ ಎಂಡೊಸ್ಕೊಪಿ’ ಎನ್ನಲಾಗುತ್ತದೆ.

ADVERTISEMENT

ಕ್ಯಾಪ್ಸೂಲ್‌ ವಿಸ್ಮಯ: ಜಠರದ ಕ್ಯಾನ್ಸರ್‌ ಅಥವಾ ಇತರ ಯಾವುದೇ ಸಮಸ್ಯೆಗೆ ಒಳಗಾದ ರೋಗಿಗೆ ಈ ಕ್ಯಾಪ್ಸೂಲ್‌ ನುಂಗಲು ನೀಡಲಾಗುತ್ತದೆ. ಇದು ಒಳಗೆ ಹೋಗುತ್ತಿದ್ದಂತೆ ಸಾವಿರಾರು ಚಿತ್ರಗಳನ್ನು ರವಾನಿಸಲಾರಂಭಿಸುತ್ತದೆ. ದೊಡ್ಡ ಕರಳು ಮತ್ತು ಸಣ್ಣ ಕರುಳಿನಲ್ಲಿ ಏನಾಗಿದೆ ಎಂಬ ಸ್ಪಷ್ಟ ಚಿತ್ರ ದೊರೆಯುತ್ತದೆ. ಈ ಚಿತ್ರಗಳನ್ನು ಆಧರಿಸಿ, ತ್ವರಿತಗತಿಯಲ್ಲಿ ಸಮಸ್ಯೆ ತಿಳಿದುಕೊಂಡು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಒಮ್ಮೆ ಈ ಕ್ಯಾಪ್ಸೂಲ್‌ ದೇಹವನ್ನು ಪ್ರವೇಶಿಸಿ ತನ್ನ ಕಾರ್ಯ ಮುಗಿಸಿದ ಬಳಿಕ, ಇತರ ತ್ಯಾಜ್ಯವಾಗಿ ಮಲದ ಮೂಲಕ ದೇಹದಿಂದ ಹೊರಹೋಗುತ್ತದೆ.

ಸ್ಪರ್ಶ್‌ ಮೊದಲ ಬಳಕೆ: ಬೆಂಗಳೂರಿನ ಸ್ಪರ್ಶ್‌ ಆಸ್ಪತ್ರೆ ಈ ಕ್ಯಾಪ್ಸೂಲ್‌ ಎಂಡೊಸ್ಕೋಪಿಯನ್ನು ಮೊದಲ ಬಾರಿಗೆ ಬಳಸಲಿದೆ. ವಿದೇಶಗಳಲ್ಲಿ ಇದರ ಬಳಕೆ ಆರಂಭವಾಗಿದೆ. ಫೆಬ್ರುವರಿ 10 ರಿಂದ ಕ್ಯಾಪ್ಸೂಲ್‌ ಎಂಡೊಸ್ಕೋಪಿ ಆರಂಭಿಸಲಾಗುತ್ತದೆ ಎಂದು ಸ್ಪರ್ಶ್‌ ಆಸ್ಪತ್ರೆಯ ಡಾ.ಶರಣ್‌ ಶಿವರಾಜ್‌ ಪಾಟೀಲ ತಿಳಿಸಿದರು.

ಅಲ್ಲದೆ, ಎಂಡೊಸ್ಕೋಪಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಾದ, ಡಬಲ್‌ ಬಲೂನ್‌ ಎಂಡೊಸ್ಕೋಪಿ, ಸ್ಪೈ ಗ್ಲಾಸ್‌ ಎಂಡೊಸ್ಕೋಪಿ ಕೂಡ ಪರಿಚಯಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸ್ಪರ್ಶ್‌ ಜಗತ್ತಿನ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಹೊರ ಹೊಮ್ಮಲಿದೆ. ಪ್ಲಾಸ್ಟಿಕ್‌ ಸರ್ಜರಿ, ಹೃದಯದ ನರತಂತುಗಳಲ್ಲಿ ಕ್ಯಾಲ್ಷಿಯಂ ಹರಳುಗಳನ್ನು ಪುಡಿ ಮಾಡಿ ರಕ್ತ ಪ್ರವಾಹ ಸುಗಮಗೊಳಿಸುವ ರೊಟಬ್ಲಾಟೇಷನ್‌ ಕೂಡ ಪರಿಚಯಿಸುತ್ತಿರುವುದಾಗಿ ಹೇಳಿದರು.

ಮೃತ ವ್ಯಕ್ತಿಯ ಕೈ ಜೀವಂತ ವ್ಯಕ್ತಿಗೆ ಕಸಿ
ರಾಜ್ಯದಲ್ಲಿ ಮೊದಲ ಬಾರಿಗೆ ಮೃತ ವ್ಯಕ್ತಿಯ ಕೈಗಳನ್ನು ಜೀವಂತ ವ್ಯಕ್ತಿಗೆ ಜೋಡಿಸಿ (ಕ್ಯಾಡವರ್‌ ಹ್ಯಾಂಡ್‌ ಟ್ರಾನ್ಸ್‌ಪ್ಲಾಂಟ್‌) ಕಸಿ ಮಾಡುವುದಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಪ್ಲಾಸ್ಟಿಕ್‌ ಸರ್ಜನ್‌ ಡಾ.ಕೆ.ಆನಂದ್‌ ತಿಳಿಸಿದರು.

ದೇಶದಲ್ಲಿ ಈ ರೀತಿ ಆರು ಜನರಿಗೆ ಕೈ ಕಸಿ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಮೊದಲ ಬಾರಿಗೆ ಕೈ ಕಸಿ ಮಾಡಲಾಗುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಇತರ ಮಿದುಳು ನಿಷ್ಕ್ರಿಯ ವ್ಯಕ್ತಿಗಳಿಂದ ಅಂಗಾಂಗ ದಾನ ಪಡೆದು, ಕಸಿ ಮಾಡುವ ವಿಧಾನವನ್ನೇ ಅನುಸರಿಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.