ADVERTISEMENT

ಫಾರ್ಚೂನರ್‌ ಕಾರು ಕದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:42 IST
Last Updated 20 ಅಕ್ಟೋಬರ್ 2021, 16:42 IST
   

ಬೆಂಗಳೂರು:ತಾನು ಕೆಲಸಕ್ಕಿದ್ದ ಮನೆಯ ಮಾಲೀಕರ ಫಾರ್ಚೂನರ್‌ ಕಾರನ್ನೇ ಕದ್ದು ಪುಣೆಯಲ್ಲಿ ಮಾರಲು ಯತ್ನಿಸಿದ್ದ ಚಾಲಕ ಚೇತನ್‌ (26) ಎಂಬಾತನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬೀದರ್‌ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಚೇತನ್‌,ಕಸ್ತೂರಿನಗರದ ನಿವಾಸಿ ಪ್ರಕಾಶ್‌ ಅವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ಕೆಲಸ ತೊರೆದಿದ್ದ. ಹಲವರ ಬಳಿ ಸಾಲ ಮಾಡಿಕೊಂಡಿದ್ದ ಆತ ಹಣ ಹಿಂತಿರುಗಿಸಲಾಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರಕಾಶ್‌ ಬಳಿ ಕೆಲಸ ಮಾಡುತ್ತಿರುವಾಗಲೇ ಕಾರಿನ ಮತ್ತೊಂದು ಕೀಲಿಯನ್ನು ಕದ್ದು ತನ್ನ ಬಳಿ ಇಟ್ಟುಕೊಂಡಿದ್ದ ಆರೋಪಿ, ಅದೇ ಕೀಲಿ ಬಳಸಿ ಮನೆಯ ಎದುರು ನಿಲ್ಲಿಸಿದ್ದ ಕಾರನ್ನು ಕದ್ದಿದ್ದ. ಈ ಬಗ್ಗೆ ಮಾಲೀಕರು ದೂರು ದಾಖಲಿಸಿದ್ದರು. ಈ ಕೃತ್ಯದಲ್ಲಿ ಚೇತನ್‌ ಭಾಗಿಯಾಗಿರುವ ಅನುಮಾನ ಇತ್ತು. ಆತನಿಗೆ ಕರೆ ಮಾಡಿದಾಗಲೆಲ್ಲಾ ಒಮ್ಮೊಮ್ಮೆ ಒಂದೊಂದು ಊರಿನಲ್ಲಿರುವುದಾಗಿ ತಿಳಿಸುತ್ತಿದ್ದ. ಆತನ ಮೊಬೈಲ್‌ ಲೊಕೇಷನ್‌ ಪರಿಶೀಲಿಸಿದಾಗ ಪುಣೆಯಲ್ಲಿ ಇರುವುದು ಗೊತ್ತಾಗಿತ್ತು. ಅಲ್ಲಿ ಆತನನ್ನು ಬಂಧಿಸಿ, ಕಾರು ಜಪ್ತಿ ಮಾಡಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಹಲವರ ಬಳಿ ಸಾಲ ಮಾಡಿಕೊಂಡಿದ್ದೆ. ದುಬಾರಿ ಕಾರು ಕದ್ದು ಮಾರಿದರೆ ಲಕ್ಷಾಂತರ ಹಣ ಸಿಗುತ್ತದೆ. ಅದರಿಂದ ಸಾಲವೂ ತೀರುತ್ತದೆ ಎಂಬ ಕಾರಣಕ್ಕೆ ಕಳ್ಳತನ ಮಾಡಿರುವುದಾಗಿ ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.