ADVERTISEMENT

ಪಡಿತರ ಚೀಟಿ‌ಗೆ ಅರ್ಜಿ ಸಲ್ಲಿಸಿದವರಿಗೂ ಅಕ್ಕಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 1:46 IST
Last Updated 18 ಏಪ್ರಿಲ್ 2020, 1:46 IST
ಕೆ.ಗೋಪಾಲಯ್ಯ
ಕೆ.ಗೋಪಾಲಯ್ಯ   

ಬೆಂಗಳೂರು: ಕೊರೊನಾದಿಂದ ಕಂಗೆಟ್ಟಿರುವ ಜನರಿಗೆ ಪರಿಹಾರ ನೀಡುವ ಸಲುವಾಗಿ ಬಿಪಿಎಲ್‌ ಮತ್ತು ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಅಕ್ಕಿ ವಿತರಿಸಲು ಸರ್ಕಾರ ಮುಂದಾಗಿದೆ.

‘ಅರ್ಜಿ ಸಲ್ಲಿಸಿದ್ದಕ್ಕೆ ಪುರಾವೆ ತೋರಿಸಿದರೆ, ಒಟಿಪಿ ಆಧಾರದಲ್ಲಿ ಪಡಿತರ ಕೊಡಲಾಗುತ್ತದೆ. 1.89 ಲಕ್ಷ ಬಿಪಿಎಲ್ ಅರ್ಜಿದಾರರಿಗೆ ಪ್ರತಿ ತಿಂಗಳು ತಲಾ 10 ಕೆ.ಜಿಯಂತೆ ಮೂರು ತಿಂಗಳು ಉಚಿತವಾಗಿ ನೀಡಲಾಗುವುದು. 1.09 ಲಕ್ಷ ಎಪಿಎಲ್‌ ಅರ್ಜಿದಾರರ ಪೈಕಿ ಅಕ್ಕಿ ಬೇಕು ಎಂದು ಕೇಳಿದ 61 ಸಾವಿರ ಮಂದಿಗೆ ಕೆ.ಜಿ.ಗೆ ₹ 15ರ ದರದಲ್ಲಿ ಪ್ರತಿ ತಿಂಗಳು ಗರಿಷ್ಠ 10 ಕೆ.ಜಿ. ಅಕ್ಕಿಯನ್ನು ಮುಂದಿನ ಮೂರು ತಿಂಗಳು ನೀಡಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

‘ಪಿಎಂಜಿಕೆವೈ ಯೋಜನೆಯಡಿಯಲ್ಲಿ 3 ತಿಂಗಳು 5 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ ಕೊಡುತ್ತಿದ್ದು, ಮೇ 1ರಿಂದ ರಾಜ್ಯದ 19,800 ನ್ಯಾಯಬೆಲೆ ಅಂಗಡಿಗಳಲ್ಲಿ ಇದನ್ನು ವಿತರಿಸಲಾಗುವುದು. ರಾಜ್ಯದಲ್ಲಿರುವ 1.19 ಕೋಟಿ ಪಡಿತರ ಚೀಟಿದಾರರಿಗೆ ಕೇಂದ್ರದಿಂದ ಉಚಿತ ಆಹಾರಧಾನ್ಯ ಪೂರೈಕೆಯಾದರೆ, 8 ಲಕ್ಷ ಪಡಿತರ ಚೀಟಿದಾರರಿಗೆ ರಾಜ್ಯದಿಂದ ಪೂರೈಕೆಯಾಗುತ್ತದೆ. ಸರ್ಕಾರ ಇದಕ್ಕಾಗಿ 3 ತಿಂಗಳ ಅವಧಿಗೆ ₹ 148 ಕೋಟಿ ಅನುದಾನಕ್ಕೆ ಅಂಗೀಕಾರ ನೀಡಿದೆ’ ಎಂದು ಅವರು ವಿವರಿಸಿದರು.

ADVERTISEMENT

ಜೋಳ ದಾಸ್ತಾನಿಗೆ ಕ್ರಮ: ‘ರಾಯಚೂರು, ವಿಜಯಪುರಗಳಲ್ಲಿ 1 ಲಕ್ಷ ಟನ್‌ ಹಿಂಗಾರು ಜೋಳ ದಾಸ್ತಾನು ಮಾಡಲು ಕೇಂದ್ರ ಅನುಮತಿ ನೀಡಿದೆ. ಇದೇ 15ರಿಂದ ಒಂದು ತಿಂಗಳ ಅವಧಿಗೆ ಭತ್ತದ ದಾಸ್ತಾನಿಗೂ ಕೇಂದ್ರದ ಅನುಮತಿ ದೊರೆತಿದೆ’ ಎಂದರು.

ಉಜ್ವಲ: 29.23 ಲಕ್ಷ ಕುಟುಂಬಗಳ ಖಾತೆಗಳಿಗೆ ಉಜ್ವಲ ಯೋಜನೆಯ ಹಣ ಸಂದಾಯವಾಗಿದೆ. 8 ಲಕ್ಷದ ಪೈಕಿ. 6.58 ಲಕ್ಷ ಸಿಲಿಂಡರ್‌ ಪೂರೈಸಲಾಗಿದೆ. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿಯಲ್ಲಿ 1 ಲಕ್ಷ ಅನಿಲ ಸಂಪರ್ಕ ನೀಡಿದ್ದು, 3 ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಒಪ್ಪಿದೆ, ಇದಕ್ಕಾಗಿ ₹ 25 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಗೋಪಾಲಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.