ಬೆಂಗಳೂರು: ಮಿರ–ಮಿರ ಮಿಂಚುತ್ತಿದ್ದ ಕಾರುಗಳು, ಅಗ್ನಿಯ ಜ್ವಾಲೆಯಲ್ಲಿ ಬೆಂದು ಅಸ್ಥಿಪಂಜರಗಳಂತಾಗಿ ಹೋಗಿದ್ದವು. ವಾಹನಗಳ ಮಾಲೀಕರು ಒಳಗೊಳಗೇ ನೋವು ನುಂಗಿಕೊಳ್ಳುತ್ತಿದ್ದರೆ, ಕುಟುಂಬದ ಸದಸ್ಯನನ್ನೇ ಕಳೆದುಕೊಂಡಂತೆ ಮಹಿಳೆಯರು–ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದರು...
ವಾಯುನೆಲೆಯ ಪಾರ್ಕಿಂಗ್ ಪ್ರದೇಶ ಶನಿವಾರ ಸ್ಮಶಾನವಾಗಿ ಬದಲಾಗಿತ್ತು. ಅಲ್ಲಿ ಕಾರುಗಳ ಸಾಮೂಹಿಕ ಅಂತ್ಯಕ್ರಿಯೆಯೇ ನಡೆದು ಹೋಗಿತ್ತು. ₹ 1.25 ಲಕ್ಷದ ನ್ಯಾನೋದಿಂದ ಹಿಡಿದು, ₹ 1 ಕೋಟಿವರೆಗಿನ ಐಷಾರಾಮಿ ಕಾರುಗಳೂ ಸುಟ್ಟು ಹೋಗಿದ್ದವು. ಬೆಂಕಿ ಪೂರ್ತಿ ನಂದಿದಾಗ ಯಾವ ಕಾರೂ ಭಿನ್ನವಾಗಿ ಕಾಣುತ್ತಿರಲಿಲ್ಲ. ತಗಡಿನ ಪಂಜರಗಳು ಬಿಟ್ಟು ಅಲ್ಲಿ ಬೇರೇನೂ ಉಳಿದಿರಲಿಲ್ಲ.
‘ಅಪ್ಪ ನನ್ನನ್ನು ದಿನಾ ಇದೇ ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ನನಗೆ ಇದೇ ಕಾರು ಬೇಕು’ ಎಂದು 7 ವರ್ಷದ ಹೆಣ್ಣು ಮಗು ಹಟ ಹಿಡಿದು ಕಣ್ಣೀರು ಸುರಿಸುತ್ತಿತ್ತು. ‘ಮದುವೆಯಾದ ಹೊಸತರಲ್ಲಿ ಕಾರು ಖರೀದಿಸಿದ್ದೆವು. ಅದರ ಜತೆ ಭಾವನಾತ್ಮಕ ನಂಟಿತ್ತು. ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಷ್ಟೇ ನೋವಾಗುತ್ತಿದೆ’ ಎನ್ನುತ್ತಾ ಆ ಮಗುವಿನ ತಾಯಿಯೂ ದುಃಖಿತರಾಗಿದರು.
ನಾಯಂಡಹಳ್ಳಿಯ ಲೋಕೇಶ್, ‘ನನ್ನದು ಸ್ವಿಫ್ಟ್ ಡಿಸೈರ್ ಕಾರು. ಮಗಳು ಹುಟ್ಟಿದ ದಿನವೇ (ಫೆ.23, 2017) ಖರೀದಿಸಿದ್ದು. ಇಂದು ಆಕೆಯ 2ನೇ ವರ್ಷದ ಹುಟ್ಟುಹಬ್ಬ. ಇದೇ ದಿನ ಅದು ಸುಟ್ಟು ಹೋಯಿತು. ವಿಮೆಯ ಹಣ ಬರಬಹುದು. ಆದರೆ, ಕಾರು ಖರೀದಿಸಿದ್ದ ಆ ಅಮೂಲ್ಯ ಸಮಯ, ಅವೇ ಭಾವನೆಗಳು ಮತ್ತೆ ಹುಟ್ಟಬೇಕಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕಣ್ಣೆದುರೇ ದಹಿಸಿತು: ‘ಬಹಳ ಇಷ್ಟ ಪಟ್ಟು ಖರೀಸಿದ ಕಾರಿದು. ಅದು ಕಣ್ಣೆದುರೇ ಧಗಧಗಿಸುತ್ತಿದ್ದರೆ ನಾವು ಏನೂ ಮಾಡದ ಪರಿಸ್ಥಿತಿಯಲ್ಲಿದ್ದೆವು..’
ಮಾರುತಿ ವ್ಯಾಗನಾರ್ ಕಾರನ್ನು ಕಳೆದುಕೊಂಡ ಸಿ.ವಿ.ರಾಮನ್ ನಗರದ ಶೀತಲ್ ಸುನೀಲ್ ಈ ಮಾತನ್ನು ಹೇಳುವಾಗ ಧ್ವನಿ ಗದ್ಗದಿತವಾಗಿತ್ತು. ಉರಿದು ಹೋದ ಕಾರಿನ ಅವಶೇಷ ಕಂಡುಅವರ ಪುಟ್ಟ ಮಗಳ ಮನಸು ಬರಿದಾಗಿತ್ತು.
‘ನಾವು ಕಾರು ನಿಲ್ಲಿಸಿಐದು ನಿಮಿಷವೂ ಕಳೆದಿರಲಿಲ್ಲ. ನಾವು ನಡೆದು ಹೋಗುತ್ತಿದ್ದಾಗ ಹೊಗೆ ಕಾಣಿಸಿಕೊಂಡಿತು. ಹಿಂತಿರುಗಿ ನೋಡಿದರೆ ಅಲ್ಲಿ ಕಾರುಗಳು ಸಿಡಿಯುತ್ತಿದ್ದವು’ ಎಂದು ಅವರು ಘಟನೆಯನ್ನು ಕಟ್ಟಿಕೊಟ್ಟರು.
ಮಹಮ್ಮದ್ ಇಬ್ರಾಹಿಂ ಎಂಬುವರು ಪತ್ನಿ ಭಾನು ಹಾಗೂ ಪುತ್ರ ಆದಿಲ್‌ನನ್ನು ಕರೆದುಕೊಂಡು ತಮ್ಮ ಮಾರುತಿ ಎಸ್–ಕ್ರಾಸ್ ಕಾರಿನಲ್ಲಿ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಬಂದಿದ್ದರು. ಕಾರು ಸುಟ್ಟು ಹೋದ ಬಳಿಕಕ ಪತ್ನಿ ಹಾಗೂ ಮಗನ ದುಃಖ ಶಮನ ಮಾಡಲು ಅವರು ಹೆಣಗಾಡುತ್ತಿದ್ದರು.
‘ಪಾರ್ಕಿಂಗ್ ಸ್ಥಳವೆಲ್ಲ ಭರ್ತಿ ಆಗಿತ್ತು. ಕಷ್ಟ ಪಟ್ಟು ಒಳಗೆ ಒಂದು ಜಾಗ ಹುಡುಕಿ ಕಾರು ನಿಲ್ಲಿಸಿದ್ದೆ. ಈಗ ನೋಡಿದರೆ ಇಲ್ಲಿ ಏನೂ ಉಳಿದಿಲ್ಲ’ ಎಂದು ಇಬ್ರಾಹಿಂ ಬೇಸರ ತೋಡಿಕೊಂಡರು.
200 ಕಾರುಗಳ ರಕ್ಷಿಸಿದರು: ಬೆಂಕಿ ಒಂದೊಂದೇ ಕಾರಿಗೆ ವ್ಯಾಪಿಸುತ್ತಿದ್ದಾಗ ಸಮಯ ಪ್ರಜ್ಞೆ ಮೆರೆದ ಕೆಲ ಯುವಕರು, ಗಾಜು ಒಡೆದು ಹ್ಯಾಂಡ್ ಬ್ರೇಕ್ ತೆಗೆಯುವ ಮೂಲಕ 20ಕ್ಕೂ ಹೆಚ್ಚು ಕಾರುಗಳನ್ನು ಸುರಕ್ಷಿತ ಸ್ಥಳಕ್ಕೆ ತಳ್ಳಿದರು. ವಾಹನಗಳ ಮಧ್ಯೆ ಅಂತರ ಸೃಷ್ಟಿಯಾಗಿದ್ದರಿಂದ ಸಾಲಿನಲ್ಲಿದ್ದ ಇನ್ನೂ 200ಕ್ಕೂ ಹೆಚ್ಚು ಕಾರುಗಳು ಉಳಿದುಕೊಂಡವು.
ನ್ಯಾನೋ ಕಾರನ್ನು ನಿಲ್ಲಿಸಿ ಹೋಗಿದ್ದ ಎಂಜಿನಿಯರ್ ಕಾರ್ತಿಕ್, ಯುವತಿಯೊಬ್ಬರ ಜೊತೆ ಪಾರ್ಕಿಂಗ್ ಸ್ಥಳಕ್ಕೆ ಓಡೋಡಿ ಬಂದರು. ಸಾಲಾಗಿ ನಿಂತ ಭಗ್ನಾವಶೇಷಗಳನ್ನು ಕಾಣುತ್ತಲೇ ಅವರಿಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ಬಿಕ್ಕಿ–ಬಿಕ್ಕಿ ಅಳುತ್ತಿದ್ದ ಅವರನ್ನು ಯುವತಿ ಅಪ್ಪಿಕೊಂಡು ಸಂತೈಸಿದರು. ಮಧುಸೂಧನ ಅವರ 23 ಲಕ್ಷ ಬಿಎಂಡಬ್ಲ್ಯು ಕಾರು ಸಂಪೂರ್ಣ ಸುಟ್ಟು ಹೋಗಿತ್ತು.
‘ಸಣ್ಣ ಅವಘಡ ಸಂಭವಿಸಿದೆ ಅಷ್ಟೆ ಎಂದು ಆಯೋಜಕರು ಘೋಷಿಸಿದಾಗ ನಿರಾಳನಾಗಿದ್ದೆ. ಮನೆಯವರು ಫೋನ್ ಮಾಡಿದಾಗಲೇ ಇಷ್ಟೊಂದು ದೊಡ್ಡ ದುರಂತ ಆಗಿದೆ ಎಂಬುದು ತಿಳಿಯಿತು. ಇಲ್ಲಿ ನೋಡುವುದಕ್ಕೆ ಏನೂ ಉಳಿದಿಲ್ಲ’ ಎಂದು ಮಧುಸೂದನ ತಿಳಿಸಿದರು.
ನನ್ನದು ಉಳಿಯಿತು: ಕಾರುಗಳಿಗೆ ಬೆಂಕಿ ಬಿದ್ದ ಸುದ್ದಿ ಕೇಳಿ ತಲೆ ಕೆಟ್ಟು ಹೋಗಿತ್ತು. ಸದ್ಯ ನನ್ನ ಕಾರು ಉಳಿದಿದೆ. ಸುಟ್ಟ ಕಾರುಗಳನ್ನು ನೋಡಿದಾಗ ಕರುಳು ಚುರುಕ್ ಎನ್ನುತ್ತದೆ ಎಂದು ಕೆ.ಆರ್.ಪುರದ ವಿಕ್ರಂ ತಿಳಿಸಿದರು.
ಬೆಳಿಗ್ಗೆ ಪ್ರದರ್ಶನ ವೀಕ್ಷಣೆಗೆ ಕಾರಿನಲ್ಲಿ ಬಂದಿದ್ದ ಕುಟುಂಬಗಳು, ಕಾರಿನ ಜತೆಗೆ ನೆಮ್ಮದಿಯನ್ನೂ ಕಲೆದುಕೊಂಡು ಬಿಎಂಟಿಸಿ ಬಸ್‌ಗಳಲ್ಲಿ ಮನೆಗಳಿಗೆ ಮರಳಿದವು. ಬಸ್‌ಗಳಲ್ಲೂ ದುರಂತದ ಬಗ್ಗೆಯೇ ಚರ್ಚೆ ನಡೆಯಿತು.
ಕಾರಿನ ಬದಲು ಕೀಗಾಗಿ ಹುಡುಕಾಟ
ಕಾರು ಕಳೆದುಕೊಂಡ ಮಾಲೀಕರೆಲ್ಲ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದರೆ ರಾಜೇಶ್ ಅವರು ಮಾತ್ರ ಸುಟ್ಟು ಹೋದ ಕಾರಿನೊಳಗಿದ್ದ ಮನೆಯ ಬೀಗದ ಕೀಲಿ ಕೈಗಾಗಿ ಹುಡುಕುತ್ತಿದ್ದರು.
‘ನನ್ನದು ಹುಂಡೈ ಐ–10 ಕಾರು. ಇಲ್ಲಿ ಇದೇ ಮಾದರಿಯ ಅನೇಕ ಕಾರುಗಳು ಸುಟ್ಟುಹೋಗಿವೆ. ಇವುಗಳ ನಂಬರ್ ಪ್ಲೇಟ್‌ಗಳೂ ಉಳಿದಿಲ್ಲ. ನನ್ನ ಕಾರಿನಲ್ಲಿ ಮನೆಯ ಬೀಗದ ಕೀಲಿ ಇತ್ತು. ಅವುಗಳು ಸಿಕ್ಕಿದರೆ ಅದೇ ನನ್ನ ಕಾರು ಎಂಬುದು ಮನದಟ್ಟಾಗುತ್ತದೆ’ ಎಂದು ರಾಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಂಘಟಕರ ವಿರುದ್ಧ ಕಿಡಿ
ತಮ್ಮ ಮಹೀಂದ್ರಾ ಎಸ್‌ಯುವಿಯನ್ನು ಕಳೆದುಕೊಂಡ ಜಯಶಂಕರ ಅವರಂತೂ ಏರೋ ಇಂಡಿಯಾ ಆಯೋಜಕರ ವಿರುದ್ಧ ಕಿಡಿಕಾರಿದರು.
‘ನನ್ನ ಜೀವನದಲ್ಲಿ ಇಷ್ಟೊಂದು ಕೆಟ್ಟದಾಗಿ ಈ ಪ್ರದರ್ಶನ ಆಯೋಜಿಸಿದ್ದನ್ನು ಕಂಡಿಲ್ಲ. ನೋಡಿ ಇಲ್ಲಿ ಇಷ್ಟೊಂದು ಕಾರುಗಳು ಹೊತ್ತಿ ಉರಿದಿವೆ. ಆದರೆ ಸಂಘಟಕರು ಮಾತ್ರ ಏನೂ ಆಗಿಲ್ಲ ಎಂಬಂತೆ ವೈಮಾನಿಕ ಪ್ರದರ್ಶನ ಮುಂದುವರಿಸಿದ್ದಾರೆ. ವಾಯುಪಡೆಯ ಒಬ್ಬ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮೊದಲೇ ಏರ್–ಶೋವನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕೆಂಬ ಕೂಗು ಎದ್ದಿದೆ. ಪದೇ ಪದೇ ಇಂಥ ದುರಂತ ಸಂಭವಿಸುತ್ತಿರುವುದನ್ನು ನೋಡಿದರೆ, ಇನ್ನು ಮುಂದೆ ಬೆಂಗಳೂರಿನಲ್ಲಿ ಪ್ರದರ್ಶನ ನೋಡುವುದು ಕನಸಿನ ಮಾತು ಎನಿಸುತ್ತದೆ’ ಎಂದು ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.
ಗನ್ ತೋರಿಸಿ ಬೆದರಿಸಿದ ಸೇನಾ ಸಿಬ್ಬಂದಿ
ಪಾರ್ಕಿಂಗ್ ಸ್ಥಳವನ್ನು ತಲುಪಲು ಎರಡು ಮಾರ್ಗಗಳಿದ್ದವು. 5ನೇ ದ್ವಾರದ ಮೂಲಕ ಸ್ಥಳವನ್ನು ತಲುಪಲು ಸೇನಾ ಸಿಬ್ಬಂದಿ ಅವಕಾಶ ನೀಡಲಿಲ್ಲ.
ಕೃಷ್ಣಾ ರೆಡ್ಡಿ ಎಂಬವರು ಗೇಟ್ –5ರ ಮೂಲಕ ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಪ್ರಯತ್ನಿಸಿದಾಗ ಗನ್ ತೋರಿಸಿ ಬೆದರಿಸಿದರು.
‘ನನ್ನ ಕಾರು ಸುಟ್ಟುಹೋಗಿದೆಯೋ ಇಲ್ಲವೋ ಎಂದು ತಿಳಿಯುತ್ತಿಲ್ಲ. ಅಲ್ಲಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದರೆ ಗನ್ ತೋರಿಸುತ್ತಾರೆ.ಏನು ಮಾಡಬೇಕು ತೋಚುತ್ತಿಲ್ಲ’ ಎಂದು ಕೃಷ್ಣಾರೆಡ್ಡಿ ಅಳಲು ತೋಡಿಕೊಂಡರು.
‘ಉಗ್ರರ ದಾಳಿ ಎಂದು ಭಾವಿಸಿದ್ದೆ’
‘ದಟ್ಟ ಹೊಗೆ ಕಂಡಾಗ ಮೊದಲು ನನ್ನ ಮನಸ್ಸಿನಲ್ಲಿ ಮೂಡಿದ್ದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ದೃಶ್ಯ. ಇಲ್ಲೂ ಅದೇ ತರಹ ದಾಳಿ ಆಗಿದೆಯೇನೋ ಎಂದು ಆತಂಕಗೊಂಡಿದ್ದೆ’ ಎಂದು ನಾಗರಬಾವಿಯ ತೇಜಸ್ವಿನಿ ತಿಳಿಸಿದರು.
ಇದ್ದದ್ದು 3, ಹೇಳಿದ್ದು 33!
‘ವಾಯುನೆಲೆ ಸಮೀಪ ಮೂರು ಅಗ್ನಿಶಾಮಕ ವಾಹನಗಳಷ್ಟೇ ಇದ್ದವು. ಅವೂ ಸ್ಥಳಕ್ಕೆ ಬಂದಿದ್ದು ಬೆಂಕಿ ಹೊತ್ತಿಕೊಂಡ 20 ನಿಮಿಷಗಳ ನಂತರ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದ ಕಾರಣದಿಂದಲೇ ದುರಂತ ಇಷ್ಟೊಂದು ಗಂಭೀರ ಸ್ವರೂಪ ಪಡೆದುಕೊಂಡಿತು’ ಎಂದು ಕಾರುಗಳ ಮಾಲೀಕರು ಆರೋಪಿಸಿದ್ದಾರೆ.
ಈ ಮಾತನ್ನು ನಿರಾಕರಿಸಿದ ಅಗ್ನಿಶಾಮಕ ಇಲಾಖೆ ಎಡಿಜಿಪಿ ಸುನೀಲ್ ಅಗರ್‌ವಾಲ್, ‘ಬೈಕ್, ವ್ಯಾನ್ ಸೇರಿದಂತೆ ಕ್ಷಿಪ್ರ ಕಾರ್ಯಾಚರಣೆಗೆಂದೇ ವಾಯುನೆಲೆ ವ್ಯಾಪ್ತಿಯಲ್ಲೇ 73 ವಾಹನಗಳನ್ನು ನಿಯೋಜಿಸಿದ್ದೆವು. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯ ಠಾಣೆಗಳಿಂದ ಹೆಚ್ಚಿನ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಂಡೆವು. ಒಟ್ಟು 33 ಅಗ್ನಿನಂದಕ ವಾಹನಗಳು ಐದಾರು ನಿಮಿಷದಲ್ಲೇ ಕಾರ್ಯಾಚರಣೆಗೆ ಇಳಿದಿದ್ದವು’ ಎಂದರು.
ದೊಡ್ಡ ದುರಂತ
2016ರ ಸೆ.22 ರಂದು ಕಾವೇರಿ ವಿವಾದ ಭುಗಿಲೆದ್ದಾಗ ನಾಯಂಡಹಳ್ಳಿಯಲ್ಲಿ ಕೆಪಿಎನ್ ಟ್ರಾವೆಲ್ಸ್‌ನ 56 ಬಸ್ಸುಗಳಿಗೆ ಉದ್ರಿಕ್ತರು ಬೆಂಕಿ ಇಟ್ಟಿದ್ದರು. ನಗರದಲ್ಲಿ ಅತಿ ಹೆಚ್ಚು ವಾಹನಗಳು ಆಹುತಿಯಾದ ಪ್ರಕರಣಗಳ ಸಾಲಿನಲ್ಲಿ ಅದೇ ಮೊದಲಿತ್ತು. ಈ ದುರಂತದ ಭೀಕರತೆ ಅದರ ಆರು ಪಟ್ಟು ದೊಡ್ಡದಿದೆ.
*
ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಜೀವದ ಹಂಗು ತೊರೆದು ಬೆಂಕಿ ನಂದಿಸಿದ್ದಾರೆ. ಅವರ ಪರಿಶ್ರಮದಿಂದಾಗಿ ಇನ್ನಷ್ಟು ಕಾರುಗಳು ಬೆಂಕಿಗಾಹುತಿಯಾಗುವುದು ತಪ್ಪಿತು
–ಚಂದ್ರಮೌಳಿ, ವಿಜ್ಞಾನ ನಗರ
*
ನನ್ನ ಕಾರು ಸ್ವಲ್ಪದರಲ್ಲಿ ಉಳಿದಿದೆ. ನಾನು ಏರೋ ಇಂಡಿಯಾ ಪ್ರದರ್ಶನಕ್ಕೆ ಬಂದಿದ್ದು ಇದೇ ಮೊದಲು. ಇನ್ನೆಂದೂ ಈ ಪ್ರದರ್ಶನದತ್ತ ಮುಖ ಮಾಡುವುದಿಲ್ಲ.
–ಲೋಹಿತ್, ಹೆಬ್ಬಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.