ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್
ಚಿತ್ರ ಕೃಪೆ: ಜೆಡಿಎಸ್ ಎಕ್ಸ್ ಖಾತೆ
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆಯ ಚರ್ಚೆಗಳು ತಾರಕಕ್ಕೇರಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯನವರು ಡಿ.ಕೆ. ಶಿವಕುಮಾರ್ ಅವರನ್ನು ತಮ್ಮ ಮನೆಗೆ ಉಪಹಾರಕ್ಕೆ ಆಹ್ವಾನಿಸಿದ್ದರು. ಇದಾದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉಪಹಾರಕ್ಕೆಂದು ತಮ್ಮ ಮನೆಗೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಉಭಯ ನಾಯಕರುಗಳು ಧರಿಸಿದ್ದ ದುಬಾರಿ ಬೆಲೆಯ ವಾಚ್ ಕುರಿತು ವಿಪಕ್ಷ ಬಿಜೆಪಿ ಎಕ್ಸ್ ಪೋಸ್ಟ್ ಮೂಲಕ ಟೀಕಿಸಿದೆ.
ಒಂದೇ ಕಂಪನಿಯ ವಾಚ್
ಬೆಳಗಿನ ತಿಂಡಿ ವೇಳೆ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರೂ ಕೂಡ ಕಾರ್ಟಿಯರ್ (Cartier) ಕಂಪನಿಯ ವಾಚ್ ಧರಿಸಿದ್ದರು. ಈ ಕಾರ್ಟಿಯರ್ ವಾಚ್ನ ಮಾರುಕಟ್ಟೆ ಬೆಲೆ ₹43 ಲಕ್ಷ ಎಂದು ಬಿಜೆಪಿ ಆರೋಪಿಸಿದೆ.
ಒಂದೇ ರೀತಿಯ ವಾಚ್ ಕಟ್ಟಿದ ಸಿಎಂ-ಡಿಸಿಎಂ
ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಉಭಯ ನಾಯಕರು ಒಂದೇ ರೀತಿ ವಾಚ್ ಕಟ್ಟಿದ್ದರು. ಅವರು ಮಾಧ್ಯಮದ ಮುಂದೇ ಬಂದಾಗ ಇಬ್ಬರು ಧರಿಸಿದ್ದ ವಾಚ್‌ಗಳು ಒಂದೇ ರೀತಿ ಹಾಗೂ ಒಂದೇ ಬ್ರ್ಯಾಂಡ್ ಎನ್ನುವುದು ಗೊತ್ತಾಗಿದೆ. ಒಟ್ಟಿಗೆ ಬ್ರೇಕ್ ಫಾಸ್ಟ್ ಮಾತ್ರವಲ್ಲದೇ ಒಂದೇ ಕಂಪನಿಯ ವಾಚ್ ಕಟ್ಟುವ ಮೂಲಕ ನಾವಿಬ್ಬರು ಒಂದೇ ಎನ್ನುವ ಸಂದೇಶ ರವಾನಿಸಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ ಪ್ರಶ್ನೆ ಇದಲ್ಲ, ಇದರ ಬೆಲೆ, ಈ ವಾಚ್ ಬೆಲೆ ಬರೋಬ್ಬರಿ ₹43 ಲಕ್ಷ ಎಂಬುದು.
ಬಿಜೆಪಿ ಆಕ್ರೋಶ
2016ರಲ್ಲಿ ಸಿದ್ದರಾಮಯ್ಯನವರು ಧರಿಸಿದ್ದ ಹ್ಯೂಬ್ಲೋಟ್ ವಾಚ್ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲ, ಅಂದು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಿದ್ದರಾಮಯ್ಯನವರು ಆ ವಾಚ್ ಅನ್ನು ಅಂದು ಹಿಂತಿರುಗಿಸಿದ್ದರು.
ಸದ್ಯ, ವಿಪಕ್ಷ ಬಿಜೆಪಿ ಎಕ್ಸ್ ಮೂಲಕ ಪೋಸ್ಟ್ ಒಂದನ್ನು ಮಾಡಿದೆ. ‘ಸಿದ್ದರಾಮಯ್ಯನವರೇ ಸಮಾಜವಾದದ ನಿಮ್ಮ ವ್ಯಾಖ್ಯಾನಕ್ಕೆ ಹೆಚ್ಚಿನ ಬೆಲೆ ಬಂದಂತೆ ಕಾಣುತ್ತಿದೆ. ಕರ್ನಾಟಕದ ಜನರು ಬರ ಮತ್ತು ಮೂಲಸೌಕರ್ಯ ಸಮಸ್ಯೆಯಿಂದಾಗಿ ಪರದಾಡುತ್ತಿದ್ದಾರೆ. ಆದರೆ, ನಮ್ಮ ‘ಸರಳ ಸಮಾಜವಾದಿ’ ಮುಖ್ಯಮಂತ್ರಿ ಸ್ಯಾಂಟೋಸ್ ಡಿ ಕಾರ್ಟಿಯರ್ ವಾಚ್ ಅನ್ನು ಪ್ರದರ್ಶಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.
ವಾಚ್ ಕುರಿತು ಜೆಡಿಎಸ್ ಆಕ್ರೋಶ
ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್, ‘ ಸಿದ್ದರಾಮಯ್ಯನವರೇ ಹೇಳಿಕೊಳ್ಳುವುದು ನಾನೊಬ್ಬ ಸಮಾಜವಾದಿ. ಅಸಲಿಗೆ ದೊಡ್ಡ ಮಜಾವಾದಿ. ಅಂದು ₹70 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಜ್ರ ಖಚಿತ ‘ಹ್ಯೂಬ್ಲೋಟ್ ವಾಚ್’ ಕಟ್ಟಿ ಟೀಕೆಗೆ ಗುರಿಯಾಗಿದ್ದ ಮಜಾವಾದಿ, ಇಂದು ಸಹ ಅವರ ಕೈಯಲ್ಲಿ ಚಿನ್ನದಿಂದ ತಯಾರಿಸಿದ ಕಾರ್ಟಿಯರ್ ಬ್ರ್ಯಾಂಡ್‌ನ ₹43 ಲಕ್ಷ ಬೆಲೆ ಬಾಳುವ ಐಷಾರಾಮಿ ವಾಚ್. ಸಿದ್ದರಾಮಯ್ಯ ಅವರೇ, ಸಮಾಜವಾದದ ಬಗ್ಗೆ ಬೊಗಳೆ ಭಾಷಣ ಮಾಡಲು ನಿಮಗೆ ಯಾವ ನೈತಿಕತೆ ಇದೆ’ ಎಂದು ಆಕ್ರೋಶ ಹೊರಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.